ಟ್ರಂಪ್ ತಪ್ಪು ನಿರ್ಧಾರದಿಂದ ಅಮೆರಿಕಗೆ ಕರಾಳ ಚಳಿಗಾಲ: ಬಿಡೆನ್ ವಾಗ್ದಾಳಿ

Update: 2020-10-23 04:09 GMT

ವಾಷಿಂಗ್ಟನ್, ಅ.23: ಅಮೆರಿಕದಲ್ಲಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣ ಸಂಬಂಧ ಡೊನಾಲ್ಡ್ ಟ್ರಂಪ್ ಆಡಳಿತ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ದೇಶ ಕರಾಳ ಚಳಿಗಾಲವನ್ನು ಎದುರಿಸಬೇಕಾದ ಸ್ಥಿತಿ ತಲುಪಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಆಯೋಜಿಸಿದ್ದ ಕಟ್ಟಕಡೆಯ ಮುಖಾಮುಖಿ ಚರ್ಚೆಯಲ್ಲಿ ಟ್ರಂಪ್ ಹಾಗೂ ಬಿಡೆನ್ ಪರಸ್ಪರ ವಾಕ್ಸಮರ ನಡೆಸಿದರು. ಅಧ್ಯಕ್ಷೀಯ ಅಭ್ಯರ್ಥಿಗಳ ಬೆಂಬಲಿಗರು ಚರ್ಚಾ ವೇದಿಕೆಯ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆರಂಭದಲ್ಲೇ ಟ್ರಂಪ್ ವಿರುದ್ಧ ವಾಗ್ದಾಳಿ ಆರಂಭಿಸಿದ ಬಿಡೆನ್, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ರಂಪ್ ಬಳಿ ಯಾವುದೇ ನಿರ್ದಿಷ್ಟ ಕಾರ್ಯಯೋಜನೆ ಇರಲಿಲ್ಲ ಎಂದು ಆಪಾದಿಸಿದರು. ಇಷ್ಟೊಂದು ದೊಡ್ಡ ಸಂಖ್ಯೆಯ ಸಾವಿಗೆ ಕಾರಣರಾದ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಬಾರದು ಎಂದರು. ತಾವು ಅಧಿಕಾರಕ್ಕೆ ಬಂದರೆ ಮಾಸ್ಕ್ ಧರಿಸುವುದು ಕಡ್ಡಾಯಪಡಿಸುವ ಜತೆಗೆ ರ್ಯಾಪಿಡ್ ಟೆಸ್ಟ್‌ಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.

ಕೊರೋನ ವೈರಸ್ ಅಪಾಯಕಾರಿ ಎಂದು ಟ್ರಂಪ್ ಜನತೆಗೆ ತಿಳಿಸಲೇ ಇಲ್ಲ. ಯಾವುದೇ ಭೀತಿಪಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಲೇ ಬಂದರು ಎಂದು ದೂರಿದರು.

ಪ್ರತಿದಾಳಿ ನಡೆಸಿದ ಟ್ರಂಪ್, ದೇಶವನ್ನು ಮುಚ್ಚಿ ಬಿಡೆನ್ ಅವರಂತೆ ಬೇಸ್‌ಮೆಂಟ್‌ನಲ್ಲಿ ವಾಸಿಸಲಾಗದು. ಜನ ಇಂದು ವೈರಸ್ ಜತೆ ಬದುಕುವ ವಿಧಾನ ಕಂಡುಕೊಂಡಿದ್ದಾರೆ. ನಾವು ಸಾಂಕ್ರಾಮಿಕ ತಡೆಗೆ ಕೈಗೊಂಡ ಕ್ರಮಗಳನ್ನು ವಿಶ್ವದ ಹಲವು ದೇಶಗಳ ಗಣ್ಯರು ಶ್ಲಾಘಿಸಿದ್ದಾರೆ ಎಂದು ಟ್ರಂಪ್ ಸಮರ್ಥಿಸಿಕೊಂಡರು. ಆದರೆ ಇದನ್ನು ಒಪ್ಪದ ಬಿಡೆನ್, "ಜನ ವೈರಸ್ ಜತೆ ಬದುಕುವುದು ಕಲಿತಿಲ್ಲ. ಸಾಯುತ್ತಿದ್ದಾರೆ" ಎಂದು ಹೇಳಿದರು.

ಯಾವುದೇ ದೇಶ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಬಿಡೆನ್ ಎಚ್ಚರಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News