ಉದ್ಯೋಗ ಸೃಷ್ಟಿಯಾಗದೇ ಇದ್ದರೆ ಯುವಜನರು ಬೀದಿಗಿಳಿಯುತ್ತಾರೆ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

Update: 2020-10-23 06:11 GMT

ಹೊಸದಿಲ್ಲಿ, ಅ.23: ‘‘ಅದು, ಇದು ಎಂದು ಹೇಳಿಕೊಂಡು ನಿರುದ್ಯೋಗಿ ಯುವಜನತೆಯ ಗಮನವನ್ನು ಸ್ವಲ್ಪ ಹೊತ್ತು ಬೇರೆಡೆಗೆ ಹರಿಸಬಹುದು. ಆದರೆ ಉದ್ಯೋಗಗಳನ್ನು ಸೃಷ್ಟಿಸದೇ ಇದ್ದರೆ ಯುವಜನರು ಬೀದಿಗಿಳಿಯುತ್ತಾರೆ. ನಾವು ಸಾಮಾಜಿಕ ಜಾಲತಾಣ, ನಕಲಿ ಸುದ್ದಿಗಳನ್ನು ಬಳಸಿ ಗಮನ ಅತ್ತ ಹರಿಸಬಹುದು, ಆದರೆ ಅಂತಿಮವಾಗಿ ಅದು ವಿಫಲವಾಗಲಿದೆ’’ ಎಂದಿದ್ದಾರೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್.

ಭವನ್ಸ್ ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ರಿಸರ್ಚ್ ಇಲ್ಲಿನ ಸೆಂಟರ್ ಫಾರ್ ಫೈನಾನ್ಶಿಯಲ್ ಸ್ಟಡೀಸ್ ಆಯೋಜಿಸಿದ್ದ ವೆಬಿನಾರ್ ಒಂದರಲ್ಲಿ ಅವರು ಮಾತನಾಡುತ್ತಿದ್ದರು.

‘‘ಸುಂಕಗಳನ್ನು ವಿಧಿಸುವ ಮೂಲಕ ಆಮದಿಗೆ ಪರ್ಯಾಯ ಕಂಡು ಹುಡುಕಲು ಗಮನ ಕೇಂದ್ರೀಕೃತವಾಗಿದ್ದರೆ, ಈ ಹಿಂದೆಯೂ ಇದೇರೀತಿ ಯತ್ನಿಸಿ ನಾವು ವಿಫಲವಾಗಿದ್ದೇವೆ ಎಂದು ನಾನು ಹೇಳಬಯಸುತ್ತೇನೆ. ಮತ್ತೆ ಅದೇ ದಿಕ್ಕಿನಲ್ಲಿ ಸಾಗುವುದರ ವಿರುದ್ಧ ಎಚ್ಚರಿಸಲು ಬಯಸುತ್ತೇನೆ’’ ಎಂದು ರಾಜನ್ ಹೇಳಿದರು.

ಅರ್ಥವ್ಯವಸ್ಥೆಯ ನಿಧಾನಗತಿಯ ಪರಿಣಾಮಗಳ ಕುರಿತಂತೆ ಮಾತನಾಡಿದ ಅವರು, ‘‘ಹಲವಾರು ಉದ್ದಿಮೆಗಳು ಖಾಯಂ ಆಗಿ ಮುಚ್ಚಿಬಿಟ್ಟರೆ ಅದು ಪೂರೈಕೆಯನ್ನು ಬಾಧಿಸುತ್ತದೆ. ತಮಗೆ ಸಾಧ್ಯವಿಲ್ಲವೆಂದು ಹಲವಾರು ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದರೆ ಅದು ಕೂಡ ಪ್ರಗತಿಯನ್ನು ಬಾಧಿಸುತ್ತದೆ. ಏಕೆಂದರೆ ಶಿಕ್ಷಣವಿಲ್ಲದ ಈ ಮಕ್ಕಳು ಮುಂದೆ ಕಡಿಮೆ ಗುಣಮಟ್ಟದ ಉದ್ಯೋಗಗಳನ್ನಷ್ಟೇ ಮಾಡಲು ಸಮರ್ಥರಾಗುತ್ತಾರೆ’’ ಎಂದು ರಾಜನ್ ಹೇಳಿದರು.

‘‘ಜನರು, ಟೀಕಾಕಾರರು, ವಿಪಕ್ಷಗಳ ಬಳಿ ಕೆಲವೊಂದು ಹೊಸ ಯೋಚನೆಗಳಿರುತ್ತವೆ ಹಾಗೂ ಇವರ ನಡುವೆ ಸಹಮತ ಏರ್ಪಟ್ಟರೆ, ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಾತರಿಗೊಳಿಸಬೇಕು’’ ಎಂದರು.

‘‘ಭಾರತದ ಅರ್ಥವ್ಯವಸ್ಥೆಯನ್ನು ಸರಿಪಡಿಸಬೇಕಿದೆ ನಾವು ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ವಿಫಲರಾಗುತ್ತಿದ್ದೇವೆ’’ ಎಂದು ರಾಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News