ಹೃದಯ ಬಡಿತ ದರವನ್ನು ಕಾಯ್ದುಕೊಳ್ಳುವುದು ಏಕೆ ಮುಖ್ಯ?

Update: 2020-10-23 13:22 GMT

ಹೃದಯವು ನಮ್ಮ ಶರೀರದಲ್ಲಿಯ ಪ್ರಮುಖ ಅಂಗವಾಗಿದೆ. ಹೃದಯವು ಸುಸ್ಥಿತಿಯಲ್ಲಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ನೆರವಾಗುವ ಮುಖ್ಯ ಸಂಕೇತವೆಂದರೆ ಹೃದಯ ಬಡಿತ ದರ. ನಮ್ಮ ಹೃದಯ ಬಡಿತ ದರವು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳಬಲ್ಲದು. ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನಾವು ಸಮತೋಲಿತ ಪೌಷ್ಟಿಕ ಆಹಾರಗಳನ್ನು ಸೇವಿಸುವ ಜೊತೆಗೆ ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಹೃದಯದ ಪಂಪಿಂಗ್ ಕ್ರಿಯೆ ಸಹಜವಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿದೆ ಎನ್ನುವುದನ್ನು ಅದು ಸೂಚಿಸುತ್ತದೆ. ನಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿ ಹೃದಯ ಬಡಿತ ದರವನ್ನು ಅವಲಂಬಿಸಿರುತ್ತದೆ. ಹೃದಯವು ನಿಧಾನವಾಗಿ ಅಥವಾ ವೇಗವಾಗಿ ಬಡಿದುಕೊಳ್ಳುವುದಕ್ಕೆ ಕಾರಣಗಳಿವೆ,ಅವುಗಳ ಪರಿಣಾಮಗಳೂ ಇವೆ.

 ಹೃದಯವು ಪ್ರತಿ ನಿಮಿಷಕ್ಕೆ 60ರಿಂದ 100 ಸಲ ಹೊಡೆದುಕೊಳ್ಳುತ್ತಿದ್ದರೆ ಅದು ಸಹಜ ಹೃದಯ ಬಡಿತ ದರವಾಗಿದೆ. ಹೃದಯ ಬಡಿತ ದರವು 60ಕ್ಕಿಂತ ಕಡಿಮೆಯಿದ್ದರೆ ಅಂತಹ ಸ್ಥಿತಿಯನ್ನು ಬ್ರಾಡಿಕಾರ್ಡಿಯಾ ಮತ್ತು 100ಕ್ಕಿಂತ ಅಧಿಕವಿದ್ದರೆ ಅದನ್ನು ಟ್ಯಾಕಿಕಾರ್ಡಿಯಾ ಎಂದು ಕರೆಯಲಾಗುತ್ತದೆ. ಆದರೆ ಹೃದಯ ಬಡಿತವನ್ನು ಸಹಜವೆಂದು ನಿರ್ಧರಿಸುವಾಗ ನೀವು ಇರುವ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನೀವು ಏನು ಮಾಡುತ್ತಿರುವಿರಿ ಎನ್ನುವುದನ್ನು ಅವಲಂಬಿಸಿ ಹೃದಯ ಬಡಿತ ದರವು ಬದಲಾಗುತ್ತಿರುತ್ತದೆ. ನೀವು ವಿಶ್ರಾಂತಿಯನ್ನು ಪಡೆಯುತ್ತಿದ್ದರೆ ಸಹಜ ಹೃದಯ ಬಡಿತ ದರ 50ರಿಂದ 70 ಆಗಿರುತ್ತದೆ. ನೀವು ವ್ಯಾಯಾಮ ಮಾಡುತ್ತಿದ್ದರೆ ಅದು ಪ್ರತಿ ನಿಮಿಷಕ್ಕೆ ಸುಮಾರು 220 ರಷ್ಟಿರಬೇಕು. ವಾಸ್ತವದಲ್ಲಿ ಹೃದಯ ಬಡಿತ ದರವು ವ್ಯಕ್ತಿಯ ವಯಸ್ಸನ್ನೂ ಅವವಲಂಬಿಸಿರುತ್ತದೆ. ಹಿರಿಯ ವ್ಯಕ್ತಿಯ ಹೃದಯ ಬಡಿತ ದರವು ಮಕ್ಕಳಿಗಿಂತ ಭಿನ್ನವಾಗಿರುತ್ತದೆ. ಇವೆಲ್ಲ ಅಂಶಗಳನ್ನು ಪರಿಗಣಿಸಿ ನಿಮ್ಮ ಹೃದಯ ಬಡಿತ ದರವು ಸಹಜವಾಗಿಲ್ಲ ಎಂದು ನಿಮಗೆ ಅನ್ನಿಸಿದರೆ ಖಂಡಿತವಾಗಿಯೂ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ನಿಮ್ಮ ಹೃದಯ ಬಡಿತವನ್ನು ಪರೀಕ್ಷಿಸಬೇಕಾದರೆ ನೀವು ನಾಡಿಮಿಡಿತವನ್ನು ಕಂಡುಕೊಳ್ಳಬೇಕು. 30 ಸೆಕೆಂಡ್‌ಗಳವರೆಗೆ ನಾಡಿ ಮಿಡಿತವನ್ನು ಎಣಿಸಿ, ಅದನ್ನು ಎರಡರಿಂದ ಗುಣಿಸಿದರೆ ಹೃದಯ ಬಡಿತ ದರವನ್ನು ಕಂಡುಕೊಳ್ಳಬಹುದು. ಇದರಿಂದ ಹೃದಯವು ವೇಗವಾಗಿ,ನಿಧಾನವಾಗಿ ಅಥವಾ ಸಹಜವಾಗಿ ಬಡಿದುಕೊಳ್ಳುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು.

 ಶರೀರವು ಸುಗಮವಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಸಹಜ ಹೃದಯ ಬಡಿತ ದರವನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ಹೃದಯವು ವೇಗವಾಗಿ ಅಥವಾ ನಿಧಾನವಾಗಿ ಬಡಿದುಕೊಳ್ಳುತ್ತಿದ್ದರೆ ಅವು ಭಿನ್ನ ಪರಿಣಾಮಗಳನ್ನುಂಟು ಮಾಡುತ್ತವೆ. ಹೃದಯ ಬಡಿತ ದರವು ಅಧಿಕವಾಗಿದ್ದರೆ ಅದು ಜ್ವರ,ಕಾರ್ಡಿಯೊಮೈಯೊಪತಿ,ಅತಿ ಕ್ರಿಯಾಶೀಲ ಥೈರಾಯ್ಡ್ ಗ್ರಂಥಿ,ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ,ರಕ್ತದಲ್ಲಿಯ ಪೊಟ್ಯಾಷಿಯಂ ಮಟ್ಟ ಕುಸಿಯಲೂ ಕಾರಣವಾಗುತ್ತದೆ. ಹೃದಯ ಬಡಿತ ದರ ನಿಧಾನವಾಗಿದ್ದರೆ ಶರೀರವು ಸಂಪೂರ್ಣ ವಿರುದ್ಧವಾಗಿ ಪ್ರತಿವರ್ತಿಸುತ್ತದೆ. ಅದು ಹೃದಯಾಘಾತ,ರಕ್ತದಲ್ಲಿ ಅತಿಯಾದ ಪೊಟ್ಯಾಷಿಯಂ ಮಟ್ಟ, ಕಡಿಮೆ ಕ್ರಿಯಾಶೀಲ ಥೈರಾಯ್ಡ್ ಮತ್ತು ಕೆಲವು ಸೋಂಕುಗಳಿಗೆ ಕಾರಣವಾಗುತ್ತದೆ. ವ್ಯಾಯಾಮದ ಮೂಲಕ ಹೃದಯ ಬಡಿತ ದರವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಯೋಗದಂತಹ ಪ್ರಕ್ರಿಯೆಗಳ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಅದನ್ನು ಕಡಿಮೆ ಮಾಡಬಹುದು. ಸಮತೋಲಿತ ಮತ್ತು ಆರೋಗ್ಯಕರ ಆಹಾರವು ಹೃದಯ ಬಡಿತವನ್ನು ಸಹಜವಾಗಿರಿಸುವಲ್ಲಿ ಮುಖ್ಯವಾಗಿದೆ. ಎಲ್ಲ ಸಮಯದಲ್ಲಿಯೂ ಹೃದಯ ಬಡಿತ ದರವು ಅನಿಯಮಿತವಾಗಿದ್ದರೆ ಅದು ಹೃದಯದ ಆರೋಗ್ಯವನ್ನು ಮತ್ತು ಅದರ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ತಲೆ ಸುತ್ತುವಿಕೆ,ಬಳಲಿಕೆ,ಉಸಿರಾಟಕ್ಕೆ ತೊಂದರೆ,ಎದೆನೋವು ಅಥವಾ ಬವಳಿಯಂತಹ ಲಕ್ಷಣಗಳಿದ್ದರೆ ಅದು ಗಂಭೀರ ಕಳವಳದ ವಿಷಯವಾಗುತ್ತದೆ.

ಹೃದಯ ಬಡಿತ ದರದ ಮಹತ್ವ ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಅದನ್ನು ಸ್ವಯಂ ಪರಿಶೀಲಿಸಿಕೊಳ್ಳುತ್ತಿರುವ ಜೊತೆಗೆ ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದಾಗಿ ಹೃದಯದ ಆರೋಗ್ಯದಲ್ಲಿ ಏನಾದರೂ ಏರುಪೇರುಗಳಿದ್ದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News