ಅಕ್ರಮವಾಗಿ ಸಾಗಿಸುತ್ತಿದ್ದ 800 ಕೆಜಿ ರಕ್ತಚಂದನ ಜಪ್ತಿ: ಇಬ್ಬರ ಬಂಧನ
ಬೆಂಗಳೂರು, ಅ.23: ಹೊರರಾಜ್ಯದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 800 ಕೆ.ಜಿ ರಕ್ತಚಂದನ ಮರದ ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿ, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅನಂತಪುರಂ ಜಿಲ್ಲೆಯ ಮದ್ದರೆಡ್ಡಿ ನಾಯಕ ಹಾಗೂ ಹೊಸಕೋಟೆಯ ಬಾಷಾ ಎಂಬವರು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಾಗೇಪಲ್ಲಿಯಿಂದ ನಗರದ ಕಡೆಗೆ ರಕ್ತಚಂದನದ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ಉಪವಲಯ ಅರಣ್ಯ ಅಧಿಕಾರಿ ತನ್ವೀರ್ ಅಹ್ಮದ್ ಹಾಗೂ ಸಿಬ್ಬಂದಿ ಹೆದ್ದಾರಿ 7ರಲ್ಲಿ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳು ವಾಹನ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ವಾಹನದಲ್ಲಿ ಆರೋಪಿಗಳ ವಾಹನವನ್ನು ಬೆನ್ನತ್ತಿದ್ದಾರೆ.
ಇದರಿಂದ ಗಾಬರಿಯಾದ ಆರೋಪಿಗಳು ನಗರ ಹೊರವಲಯದ ವಾಪಸಂದ್ರ ಬಳಿ ಬೇರೊಂದು ವಾಹನಕ್ಕೆ ಢಿಕ್ಕಿ ಹೊಡೆದು ನಿಲ್ಲಿಸಿದ್ದಾರೆ. ಢಿಕ್ಕಿ ರಭಸಕ್ಕೆ ಆರೋಪಿಗಳು ಇದ್ದ ವಾಹನ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದ ಪರಿಣಾಮ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.