×
Ad

ವ್ಹೀಲಿಂಗ್ ಆರೋಪ: 16 ಮಂದಿ ವಿರುದ್ಧ ಪ್ರಕರಣ ದಾಖಲು

Update: 2020-10-23 23:48 IST

ಬೆಂಗಳೂರು, ಅ.23: ಸುರಕ್ಷತೆಗೆ ಹಾನಿಯುಂಟಾಗುವ ರೀತಿಯಲ್ಲಿ ದೋಷಪೂರಿತ ಸೈಲೆನ್ಸ್ ಗಳನ್ನು ಅಳವಡಿಸಿ ಕೊಂಡು ವ್ಹೀಲಿಂಗ್ ಮಾಡುತ್ತಿದ್ದ 16 ಮಂದಿ ವಾಹನ ಸವಾರರ ವಿರುದ್ಧ ಒಟ್ಟು 3 ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಇರ್ಷಾದ್(24), ಉಮ್ರಾಝ್ (24), ರವಿಕುಮಾರ್(24), ದ್ರಾವಿಡ್(21), ಪ್ರಶಾಂತ್(21) ರಂಜಿತ್(21) ಸೇರಿದಂತೆ 16 ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ವಾಹನ ಸವಾರರನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮನವಿಯನ್ನು ಪುರಸ್ಕರಿಸಿದ ದಂಡಾಧಿಕಾರಿಗಳು, ದೋಷಪೂರಿತ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡಿರುವ ಸವಾರರಿಗೆ 50 ಸಾವಿರ ರೂ. ಮೊತ್ತಕ್ಕೆ 6 ತಿಂಗಳ ಅವಧಿಗೆ ವೈಯಕ್ತಿಕ ಮುಚ್ಚಳಿಕೆಯನ್ನು ಪಡೆದು ಜತೆಗೆ ವ್ಹೀಲಿಂಗ್ ಮಾಡುತ್ತಿದ್ದ ಸವಾರರಿಗೆ 2 ಲಕ್ಷ ರೂ. ಮೊತ್ತಕ್ಕೆ 6 ಅವಧಿಗೆ ವೈಯಕ್ತಿಕ ಮುಚ್ಚಳಿಕೆಯನ್ನು ಪಡೆದು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡದಂತೆ ಸದ್ವರ್ತನೆಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿ ಆದೇಶಿಸಿರುತ್ತಾರೆ.

ಮುಂದಿನ ದಿನಗಳಲ್ಲಿ ಇದೇ ರೀತಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಉಲ್ಲಂಘನೆಗಳನ್ನು ಪುನರಾವರ್ತನೆ ಮಾಡಿದಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ಸೂಕ್ತ ಕಾನೂನುರಿತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News