ಬಿಹಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಗಳನ್ನು ಗಾಳಿಗೆ ತೂರಿದ ರಾಜಕೀಯ ಪಕ್ಷಗಳು

Update: 2020-10-24 12:04 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ, ಅ.24: ಅಪರಾಧ ಹಿನ್ನೆಲೆಯುಳ್ಳವರನ್ನು ಚುನಾವಣಾ ಅಭ್ಯರ್ಥಿಗಳನ್ನಾಗಿಸದಂತೆ ಎಂಟು ತಿಂಗಳ ಹಿಂದಷ್ಟೇ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಸೂಚನೆಯನ್ನು ಬಿಹಾರದಲ್ಲಿ ರಾಜಕೀಯ ಪಕ್ಷಗಳು ಗಾಳಿಗೆ ತೂರಿವೆ. ಬಿಹಾರ ವಿಧಾನಸಭೆಗೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ 1,066 ಅಭ್ಯರ್ಥಿಗಳ ಪೈಕಿ 328 ಜನರು ಕ್ರಿಮಿನಲ್ ಪ್ರಕರಣಗಳ ಸರದಾರರಾಗಿದ್ದಾರೆ. ಈ ಪೈಕಿ 29 ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧಗಳ ಆರೋಪಿಗಳೂ ಆಗಿದ್ದಾರೆ ಮತ್ತು ಮೂವರ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎನ್ನುವುದು ಅಭ್ಯರ್ಥಿಗಳು ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿರುವ ಅಫಿಡವಿಟ್‌ಗಳ ವಿಶ್ಲೇಷಣೆಯು ಬೆಟ್ಟು ಮಾಡಿದೆ.

ಮೊದಲ ಹಂತದ ಮತದಾನವು ಅ.28ರಂದು 71 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.

► ಕ್ರಿಮಿನಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಬಿಜೆಪಿ, ಆರ್‌ಜೆಡಿ ಮುಂದು

ಮೊದಲ ಹಂತದ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಕಳಂಕಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು,ಆರ್‌ಜೆಡಿ ಮತ್ತು ಬಿಜೆಪಿ ಅಗ್ರಸ್ಥಾನಗಳಲ್ಲಿವೆ. ಬಿಹಾರ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ವಿಶ್ಲೇಷಣೆಯಂತೆ ಶೇ.31ರಷ್ಟು ಅಥವಾ 328 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಒಟ್ಟು 1,066 ಅಭ್ಯರ್ಥಿಗಳ ಪೈಕಿ ಇಬ್ಬರ ಅಫಿಡವಿಟ್‌ಗಳನ್ನು ಕಳಪೆಯಾಗಿ ಸ್ಕಾನ್ ಮಾಡಲಾಗಿದ್ದರಿಂದ ಅಥವಾ ಚುನಾವಣಾ ಆಯೋಗದ ಜಾಲತಾಣದಲ್ಲಿ ಲಭ್ಯವಿರದ್ದರಿಂದ ಅವುಗಳ ವಿಶ್ಲೇಷಣೆ ನಡೆಸಲು ಸಾಧ್ಯವಾಗಿಲ್ಲ.

ಆರ್‌ಜೆಡಿಯ 41 ಅಭ್ಯರ್ಥಿಗಳ ಪೈಕಿ 30 (ಶೇ.73) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಆರ್‌ಜೆಡಿ ಜೊತೆ ತುರುಸಿನ ಪೈಪೋಟಿಯಲ್ಲಿರುವ ಬಿಜೆಪಿಯ 29 ಅಭ್ಯರ್ಥಿಗಳ ಪೈಕಿ 21 (ಶೇ.72) ಜನರು ಕಳಂಕಿತರಾಗಿದ್ದಾರೆ. ಇತರ ಪಕ್ಷಗಳ ಪೈಕಿ ಎಲ್‌ಜೆಪಿ ಶೇ.59(41ರಲ್ಲಿ 24),ಕಾಂಗ್ರೆಸ್ ಶೇ.57(21ರಲ್ಲಿ 12) ಮತ್ತು ಜೆಡಿಯು ಶೇ.31 (26ರಲ್ಲಿ 8)ರಷ್ಟು ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

► ಶೇ.23ರಷ್ಟು ಅಭ್ಯರ್ಥಿಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು

ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಶೇ.23ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ಗರಿಷ್ಠ ಜೈಲುಶಿಕ್ಷೆಯು ಐದು ವರ್ಷ ಅಥವಾ ಅದಕ್ಕೂ ಹೆಚ್ಚಾಗಿದ್ದರೆ,ಅಪರಾಧವು ಜಾಮೀನುರಹಿತವಾಗಿದ್ದರೆ,ಹಲ್ಲೆ,ದಾಳಿ ಅಪಹರಣ ಅಥವಾ ಅತ್ಯಾಚಾರದಂತಹ ಪ್ರಕರಣಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಜನತಾ ಪ್ರಾತಿನಿಧ್ಯ ಕಾಯ್ದೆ,ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳೂ ಈ ವರ್ಗಕ್ಕೆ ಸೇರುತ್ತವೆ.

ಗಂಭೀರ ಅಪರಾಧಗಳನ್ನು ಹೊಂದಿರುವ ಅಭ್ಯರ್ಥಿಗಳು ಆರ್‌ಜೆಡಿಯಲ್ಲೇ ಗರಿಷ್ಠ ಸಂಖ್ಯೆಯಲ್ಲಿದ್ದಾರೆ (ಶೇ.54). ನಂತರದ ಸ್ಥಾನಗಳಲ್ಲಿ ಎಲ್‌ಜೆಪಿ (ಶೇ.49),ಬಿಜೆಪಿ (ಶೇ.45),ಕಾಂಗ್ರೆಸ್ (ಶೇ.43),ಜೆಡಿಯು (ಶೇ.29) ಮತ್ತು ಬಿಎಸ್‌ಪಿ (ಶೇ.19) ಇವೆ.

► 29 ಅಭ್ಯರ್ಥಿಗಳ ವಿರುದ್ಧ ಮಹಿಳೆಯರ ವಿರುದ್ಧ ಅಪರಾಧ ಆರೋಪ

ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತು,ವಿಶೇಷವಾಗಿ ಹತ್ರಸ್ ಮತ್ತು ದೇಶದ ಇತರ ಭಾಗಗಳಲ್ಲಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯಗಳ ಬಳಿಕ ಭಾರೀ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದರೂ ಇಂತಹ ಅಪರಾಧಗಳ ಆರೋಪ ಹೊತ್ತಿರುವವರಿಗೆ ರಾಜಕೀಯ ಪಕ್ಷಗಳು ಈಗಲೂ ಚುನಾವಣಾ ಟಿಕೆಟ್‌ಗಳನ್ನು ನೀಡುತ್ತಿವೆ ಎನ್ನುವುದನ್ನು ವಿಶ್ಲೇಷಣೆಯು ಬೆಟ್ಟು ಮಾಡಿದೆ. 29 ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧಗಳ ಪ್ರಕರಣಗಳನ್ನು ಹೊಂದಿದ್ದು,ಈ ಪೈಕಿ ಮೂವರು ಅತ್ಯಾಚಾರದ ಆರೋಪಗಳನ್ನು ಹೊತ್ತಿದ್ದಾರೆ.

ಇದಲ್ಲದೆ 21 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣಗಳಿದ್ದರೆ 62 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆಯತ್ನ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಮೊದಲ ಹಂತದ ಮತದಾನ ನಡೆಯಲಿರುವ 71 ಕ್ಷೇತ್ರಗಳ ಪೈಕಿ 61(ಶೇ.86) ‘ರೆಡ್ ಅಲರ್ಟ್ ’ಕ್ಷೇತ್ರಗಳಾಗಿವೆ. ಅಂದರೆ ಈ ಕ್ಷೇತ್ರಗಳಲ್ಲಿ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಮೂರು ಅಥವಾ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

► ಸರ್ವೋಚ್ಚ ನ್ಯಾಯಾಲಯದ ನಿರ್ದೇಶಕ್ಕೆ ಬೆಲೆಯೇ ಇಲ್ಲ

ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಆಯ್ಕೆಗೆ ಮತ್ತು ಇಂತಹ ಹಿನ್ನೆಲೆಯಿಲ್ಲದವರಿಗೆ ಏಕೆ ಟಿಕೆಟ್ ನೀಡಿಲ್ಲ ಎನ್ನುವುದಕ್ಕೆ ಕಾರಣಗಳನ್ನು ವಿವರಿಸುವಂತೆ ಸರ್ವೋಚ್ಚ ನ್ಯಾಯಾಲಯವು 2020,ಫೆ.13ರಂದು ರಾಜಕೀಯ ಪಕ್ಷಗಳಿಗೆ ನಿರ್ದಿಷ್ಟ ನಿರ್ದೇಶವನ್ನು ನೀಡಿತ್ತು. ಆದರೆ ಈ ನಿರ್ದೇಶವು ರಾಜಕೀಯ ಪಕ್ಷಗಳಿಗೆ ಯಾವುದೇ ತೊಡಕನ್ನುಂಟು ಮಾಡಿಲ್ಲ ಮತ್ತು ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುವ ತಮ್ಮ ಹಳೆಯ ಚಾಳಿಯನ್ನೇ ಅವು ಮುಂದುವರಿಸಿವೆ.

► ಶ್ರೀಮಂತ ಅಭ್ಯರ್ಥಿಗಳಿಗೇ ಹೆಚ್ಚಿನ ಪಕ್ಷಗಳ ಆದ್ಯತೆ

ಬಿಹಾರದಂತಹ ಬಡರಾಜ್ಯದಲ್ಲಿಯೂ ಹೆಚ್ಚಿನ ಅಭ್ಯರ್ಥಿಗಳು ಶ್ರೀಮಂತಿಕೆಯ ಹಿನ್ನೆಲೆಯವರಾಗಿದ್ದಾರೆ ಎನ್ನುವುದನ್ನು ಎಡಿಆರ್ ವಿಶ್ಲೇಷಣೆಯು ತೋರಿಸಿದೆ. 1,066 ಅಭ್ಯರ್ಥಿಗಳ ಪೈಕಿ 375 ಅಥವಾ ಶೇ.35ರಷ್ಟು ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಈ ಪೈಕಿ 93 ಅಭ್ಯರ್ಥಿಗಳು ಐದು ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿವಂತರಾಗಿದ್ದಾರೆ. ಕೋಟ್ಯಧೀಶ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಆರ್‌ಜೆಡಿ (ಶೇ.95)ಯೇ ಮುಂದಿದೆ. ಜೆಡಿಯು (ಶೇ.89),ಬಿಜೆಪಿ (ಶೇ.83),ಎಲ್‌ಜೆಪಿ (ಶೇ.73),ಕಾಂಗ್ರೆಸ್ (ಶೇ.67) ಮತ್ತು ಬಿಎಸ್‌ಪಿ (ಶೇ.46) ನಂತರದ ಸ್ಥಾನಗಳಲ್ಲಿವೆ.

► ಶೇ.43 ಅಭ್ಯರ್ಥಿಗಳು ಓದಿದ್ದು 12ನೇ ತರಗತಿಯವರೆಗೆ ಮಾತ್ರ

 ಶ್ರೀಮಂತಿಕೆ ಮತ್ತು ಕ್ರಿಮಿನಲ್ ಆರೋಪಗಳು ಅಭ್ಯರ್ಥಿಗಳ ಅಫಿಡವಿಟ್‌ನಲ್ಲಿ ಎದ್ದು ಕಾಣುವ ಅಂಶಗಳಾಗಿದ್ದರೆ,ಅವರ ಶಿಕ್ಷಣಾರ್ಹತೆಗಳ ಬಗ್ಗೆ ಹೆಚ್ಚು ಹೇಳುವಂತೆಯೇ ಇಲ್ಲ. ಐವರು ಅಭ್ಯರ್ಥಿಗಳು ನಿರಕ್ಷರಸ್ಥರಾಗಿದ್ದರೆ, 74 ಅಭ್ಯರ್ಥಿಗಳು ತಾವು ಅಕ್ಷರಸ್ಥರು ಎಂದು ಹೇಳಿಕೊಂಡಿದ್ದಾರೆ. 455 ಅಭ್ಯರ್ಥಿಗಳು (ಶೇ.43) 5ರಿಂದ 12ನೇ ತರಗತಿಯವರೆಗೆ ಓದಿದ್ದರೆ, ಕೇವಲ 522 ಅಭ್ಯರ್ಥಿಗಳು (ಶೇ.49) ಪದವಿ ಮತ್ತು ಅದಕ್ಕೂ ಹೆಚ್ಚಿನ ಶಿಕ್ಷಣ ಹೊಂದಿದ್ದಾರೆ.

► ಕ್ರಿಮಿನಲ್ ಅಭ್ಯರ್ಥಿಗಳ ಅನರ್ಹತೆಗೆ ಆಗ್ರಹ

ಕ್ರಿಮಿನಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಸರ್ವೋಚ್ಚ ನ್ಯಾಯಾಲಯವು ದಂಡಿಸಬೇಕು ಎಂದು ಆಗ್ರಹಿಸಿರುವ ಎಡಿಆರ್, ಕೊಲೆ, ಅತ್ಯಾಚಾರ, ಕಳ್ಳಸಾಗಾಣಿಕೆ, ದರೋಡೆ, ಅಪಹರಣದಂತಹ ಘೋರ ಅಪರಾಧಗಳಿಗಾಗಿ ದೋಷನಿರ್ಣಯಗೊಂಡ ಅಭ್ಯರ್ಥಿಗಳನ್ನು ಕಾಯಂ ಆಗಿ ಅನರ್ಹಗೊಳಿಸಬೇಕು. ತಮ್ಮ ವಿರುದ್ಧ ಗಂಭೀರ ಅಪರಾಧಗಳು ರೂಪಿಸಲ್ಪಟ್ಟಿರುವರು ಚುನಾವಣೆಗಳಿಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಕಳಂಕಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವ ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯತಿಗಳನ್ನು ರದ್ದುಗೊಳಿಸಬೇಕು ಮತ್ತು ಅವುಗಳ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News