ರೈಲ್ವೆ ಖಾಸಗೀಕರಣ ನಿಜಕ್ಕೂ ಕಾರ್ಯಸಾಧುವೇ..?

Update: 2020-10-24 19:30 GMT

ರೈಲ್ವೆಯ ಖಾಸಗೀಕರಣದಿಂದ ಕ್ರಮೇಣ ರೈಲ್ವೆ ಲಾಭಗಳಿಸುವ ಒಂದು ಉದ್ಯಮವಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ. ಇದು ಕಡಿಮೆ ಪ್ರಯಾಣಿಕರು ಸಂಚರಿಸುವ ರೈಲ್ವೆ ಮಾರ್ಗಗಳ ನಿರ್ಮೂಲನೆಗೆ ಕಾರಣವಾಗುತ್ತದೆ. ದರಗಳ ಹೆಚ್ಚಳವು ಆರ್ಥಿಕವಾಗಿ ಹಿಂದುಳಿದ ಜನರಿಗೆ ರೈಲ್ವೆ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರೈಲ್ವೆ ಖಾಸಗೀಕರಣ ಗ್ರಾಮೀಣ-ನಗರ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ ಎನ್ನುತ್ತಾರೆ ತಜ್ಞರು.


ಭಾರತೀಯ ರೈಲ್ವೆ ಸುಮಾರು 165 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಇದು ಪ್ರಪಂಚದ ಅತಿ ದೊಡ್ಡ ರೈಲ್ವೆ ಸಂಪರ್ಕಗಳಲ್ಲೊಂದು. ದೇಶದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ರೈಲ್ವೆಯಲ್ಲಿ ದುಡಿಯುತ್ತಿದ್ದಾರೆ. ಭಾರತೀಯ ರೈಲ್ವೆ ಸುಮಾರು 13,000ಕ್ಕೂ ಹೆಚ್ಚು ರೈಲುಗಳನ್ನು ಹೊಂದಿದ್ದು, ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ತಲುಪಿಸುತ್ತದೆ. ರೈಲ್ವೆ ಇಲಾಖೆಯಲ್ಲಿ 9,000ಕ್ಕೂ ಹೆಚ್ಚು ಸರಕು ಸಾಗಣೆ ರೈಲುಗಳು ಇದ್ದು ದಿನನಿತ್ಯ ಲಕ್ಷಗಟ್ಟಲೆ ಟನ್‌ಗಳ ಸರಕು ಸಾಗಣೆ ಮಾಡುತ್ತಿವೆ. ಸದ್ಯ ರೈಲ್ವೆ ವಿಚಾರವು ಸುದ್ದಿಯಲ್ಲಿದ್ದು ಸರಕಾರವು ಇದರ ಖಾಸಗೀಕರಣದ ಬಗ್ಗೆ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹಾದಿಯಲ್ಲಿ ಭಾರತೀಯ ರೈಲ್ವೆ ತನ್ನ ನೆಟ್‌ವರ್ಕ್‌ನಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಸಂಸ್ಥೆಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಸದ್ಯದ ಮಾಹಿತಿಯ ಪ್ರಕಾರ 2022ರಲ್ಲಿ ಸುಮಾರು 12 ಖಾಸಗಿ ರೈಲುಗಳು ಮತ್ತು 2027ರ ಹೊತ್ತಿಗೆ 151 ಖಾಸಗಿ ರೈಲುಗಳು ಹಳಿಗಳ ಮೇಲೆ ಪ್ರತ್ಯಕ್ಷವಾಗುತ್ತವೆ.

ಭಾರತೀಯ ರೈಲ್ವೆ ದೇಶದ ಸಾಮಾನ್ಯ ಜನರ ‘ಗರೀಭ್‌ರಥ’ ಎಂದರೂ ತಪ್ಪಲ್ಲ. ರೈಲ್ವೆಯು ದೇಶದಲ್ಲಿ ಕಡಿಮೆದರದಲ್ಲಿ ಹಾಗೂ ಸುರಕ್ಷಿತವಾಗಿ ಸಂಚರಿಸುವ ಸಾಧನ. ಇಂದು ರೈಲ್ವೆಯು ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಅಂಗವಿಕಲ, ಕ್ಯಾನ್ಸರ್ ರೋಗಿಗಳು, ರಕ್ಷಣಾ ಇಲಾಖೆಯ ನೌಕರರು ಎಲ್ಲರಿಗೂ ಕೆಲವು ರೀತಿಯಲ್ಲಿ ರಿಯಾಯಿತಿ ಕೊಡುತ್ತಿದೆ. ಅದೇ ರೀತಿ ಸರಕು ಸಾಗಣೆಯನ್ನು ದೇಶದ ಉದ್ದಗಲಕ್ಕೂ ಕಡಿಮೆದರದಲ್ಲಿ ಸಾಗಿಸುತ್ತಿದೆ. ಇದಲ್ಲದೆ ಉಚಿತ ಅಂತರ್ಜಾಲ ವ್ಯವಸ್ಥೆಯನ್ನು ಸಹ ಒದಗಿಸಿದೆ. ಇದೆಲ್ಲದರ ಮಧ್ಯೆ ಸರಕಾರ ಕಾರ್ಮಿಕ ವಿರೋಧಿ ಮತ್ತು ಸಾರ್ವಜನಿಕರಿಗೆ ಅನನುಕೂಲವಾಗುವ ರೀತಿಯಲ್ಲಿ ರೈಲ್ವೆ ಖಾಸಗೀಕರಣ ಮಾಡುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಈಗಾಗಲೇ ಸರಕಾರವು ಏರ್‌ಇಂಡಿಯಾದ ಸಂಪರ್ಕ ವಿಭಾಗ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ ಕೆಲವು ವಿಭಾಗಗಳನ್ನು ಖಾಸಗೀಕರಣ ಮಾಡಿದೆ.

ರೈಲ್ವೆ ಖಾಸಗೀಕರಣ ವಿಚಾರದಲ್ಲಿ ಈಗ ಪರ ಮತ್ತು ವಿರೋಧಗಳು ಉಂಟಾಗಿವೆ. ವಿಶ್ವದ ಬೇರೆ ಬೇರೆ ಸರಕಾರಗಳು ರೈಲ್ವೆ ಖಾಸಗೀಕರಣ ಮಾಡಿ ಕೈಸುಟ್ಟುಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಬ್ರಿಟಿಷ್ ಸರಕಾರ ತನ್ನ ರೈಲ್ವೆಯನ್ನು ಖಾಸಗೀಕರಣ ಮಾಡಿ ತೊಂದರೆಗೊಳಗಾಗಿ ಕೊನೆಗೆ ದೇಶದ ರೈಲ್ವೆ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅದೇ ರೀತಿ ಅರ್ಜೆಂಟೀನಾ ಸರಕಾರವು ರೈಲ್ವೆ ಖಾಸಗೀಕರಣ ಮಾಡಿ ತೊಂದರೆಗೊಳಗಾಗಿ ಪುನಃ ರಾಷ್ಟ್ರೀಕರಣ ಮಾಡಿದೆ. ನ್ಯೂಝಿಲ್ಯಾಂಡ್ 1980ರಲ್ಲಿ ರೈಲ್ವೆ ಖಾಸಗೀಕರಣ ಮಾಡಿ ಬಹಳ ಆರ್ಥಿಕ ಸಮಸ್ಯೆ ಉಂಟಾಗಿ 2008ರಲ್ಲಿ ಪುನಃ ತಾನೇ ವಹಿಸಿಕೊಂಡಿದೆ. ಅಲ್ಲದೇ ರಶ್ಯ, ಕೆನಡ, ಫ್ರಾನ್ಸ್, ಇಟಲಿ, ಐರ್‌ಲ್ಯಾಂಡ್, ಮುಂತಾದ ದೇಶಗಳು ತಮ್ಮ ರೈಲ್ವೆಗಳನ್ನು ಖಾಸಗೀಕರಣ ಮಾಡಿಕೊಂಡು ಸಮಸ್ಯೆಗಳು ಅನುಭವಿಸಿ ಕೊನೆಗೆ ಪುನಃ ರಾಷ್ಟ್ರೀಕರಣಗೊಳಿಸಿಕೊಂಡಿವೆ. ಅಲ್ಲಿನ ಸಂಶೋಧನಾ ಸಂಸ್ಥೆಗಳು ಮತ್ತು ತಜ್ಞರು ಅದರ ಬಗ್ಗೆ ಅಧ್ಯಯನ ಮಾಡಿ ರೈಲ್ವೆಯನ್ನು ಖಾಸಗೀಕರಣ ಮಾಡುವುದು ಸಮಂಜಸವಲ್ಲ ಎಂಬ ವರದಿ ನೀಡಿವೆ. ಕೇಂದ್ರ ಸರಕಾರ ಈಗಾಗಲೇ ರೈಲ್ವೆಯನ್ನು ಸಂಪೂರ್ಣ ಖಾಸಗೀಕರಣ ಮಾಡಲು ಹಂತ ಹಂತವಾಗಿ ಪ್ರಾರಂಭಿಸಿದೆ. ಆದರೆ ಅದು ನಮ್ಮ ಗಮನಕ್ಕೆ ಬಂದಿಲ್ಲ.

ಈಗಾಗಲೇ ರೈಲ್ವೆಯ ಕೆಲವು ಭಾಗಗಳಾದ ನಿಲ್ದಾಣ ನಿರ್ವಹಣೆ, ಶುಚಿತ್ವ, ಬೋಗಿಗಳ ನಿರ್ವಹಣೆ, ಪ್ರಯಾಣಿಕರಿಗೆ ಆಹಾರ ನೀಡುವುದು ಮುಂತಾದವುಗಳನ್ನು ಖಾಸಗೀಕರಣಗೊಳಿಸಲಾಗಿದೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಕೆಲಸದಲ್ಲಿ ಕಡಿತವಾಗಿದೆ.ಅಲ್ಲದೆ ಖಾಸಗಿಯವರು ಲಾಭದ ದೃಷ್ಟಿಯಲ್ಲಿ ಯಾವ ಕೆಲಸಗಳನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ. ಉದಾಹರಣೆಗೆ ಖಾಸಗಿಯವರು ರೈಲಿನಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಆಗಾಗ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುತ್ತದೆ. ರೈಲ್ವೆ ಖಾಸಗೀಕರಣದಿಂದ ಕ್ರಮೇಣ ಅನೇಕ ಸಮಸ್ಯೆಗಳು ನಿಧಾನವಾಗಿ ಹೆಚ್ಚುವ ಸಾಧ್ಯತೆಗಳು ಇರುತ್ತವೆ. ಹೆಚ್ಚು ಹಣ ಪಾವತಿಸಿ ಕಡಿಮೆ ಮಟ್ಟದ ಸೌಲಭ್ಯಒದಗಿಸುವುದು, ಕಡಿಮೆ ಗುಣಮಟ್ಟದ ಆಹಾರ ಸರಬರಾಜು ಮಾಡಿ ಹೆಚ್ಚಿನ ಹಣ ಪಡೆಯುವುದು, ರೆಸ್ಟ್‌ರೂಮ್, ಶೌಚಾಲಯ, ದಿಂಬು, ಹೊದಿಕೆ ಇತ್ಯಾದಿಗಳನ್ನು ಹಣತೆಗೆದುಕೊಂಡು ಕೊಡುವುದು, ಹೆಚ್ಚಿನ ಆದಾಯ ಬರುವ ಕಡೆಗಳಲ್ಲಿ ಮಾತ್ರ ಸಂಚರಿಸುವುದು, ಕಡಿಮೆ ಆದಾಯ ಬರುವ ಕಡೆ ಯಾವುದೇ ರೈಲನ್ನು ಬಿಡದೇ ಇರುವುದು, ಕಡಿಮೆ ಪ್ರಯಾಣಿಕರು ಇರುವ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸದೆ ಇರುವುದು, ಈಗ ಇರುವ ರಿಯಾಯಿತಿಗಳನ್ನು ನಿಧಾನವಾಗಿ ರದ್ದುಗೊಳಿಸುವುದು, ಟಿಕೆಟ್‌ದರವನ್ನು ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸುವುದು, ಪ್ಲಾಟ್‌ಫಾರಂ ಟಿಕೆಟುಗಳ ದರದಲ್ಲಿ ಹೆಚ್ಚಳ, ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಿದರೆ ಹೆಚ್ಚಿನ ದರ ಪಡೆಯುವುದು, ಖಾಯಂ ನೌಕರಿಯನ್ನು ಹಂತಹಂತವಾಗಿ ರದ್ದುಗೊಳಿಸುವುದು ಇತ್ಯಾದಿ.

ಭಾರತೀಯ ರೈಲ್ವೆ ಸರಕಾರಿ ಸ್ವಾಮ್ಯದಲ್ಲಿರುವುದರ ಪ್ರಯೋಜನವೆಂದರೆ ಅದು ಲಾಭದ ಹೊರತಾಗಿಯೂ ರಾಷ್ಟ್ರವ್ಯಾಪಿ ಸಂಪರ್ಕವನ್ನು ಕಡಿಮೆದರದಲ್ಲಿ ಒದಗಿಸುತ್ತದೆ. ರೈಲ್ವೆಯ ಖಾಸಗೀಕರಣದಿಂದ ಕ್ರಮೇಣ ರೈಲ್ವೆ ಲಾಭಗಳಿಸುವ ಒಂದು ಉದ್ಯಮವಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ. ಇದು ಕಡಿಮೆ ಪ್ರಯಾಣಿಕರು ಸಂಚರಿಸುವ ರೈಲ್ವೆ ಮಾರ್ಗಗಳ ನಿರ್ಮೂಲನೆಗೆ ಕಾರಣವಾಗುತ್ತದೆ. ದರಗಳ ಹೆಚ್ಚಳವು ಆರ್ಥಿಕವಾಗಿ ಹಿಂದುಳಿದ ಜನರಿಗೆ ರೈಲ್ವೆ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರೈಲ್ವೆ ಖಾಸಗೀಕರಣ ಗ್ರಾಮೀಣ-ನಗರ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ ಎನ್ನುತ್ತಾರೆ ತಜ್ಞರು. ರೈಲ್ವೆ ಖಾಸಗೀಕರಣ ಅಪಘಾತ, ಭದ್ರತೆ ಇನ್ನಿತರ ಹೊಣೆಗಾರಿಕೆಯ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ತಾಂತ್ರಿಕವಾಗಿ ಉಂಟುಮಾಡಬಹುದು. ಸರಕಾರದಂತೆ ಇಡೀ ರೈಲ್ವೆ ವ್ಯವಸ್ಥೆಯನ್ನು ಖಾಸಗಿ ವ್ಯಕ್ತಿಗಳು ಒಪ್ಪದೆ ನಿರ್ವಹಿಸಲು ಸಾಧ್ಯವಿಲ್ಲ ಅಥವಾ ಸರಕಾರ ರಾಜ್ಯ ಅಥವಾ ಜಿಲ್ಲೆಗಳಿಗೆ ಅನುಸಾರವಾಗಿ ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ನೀಡಿದರೆ ಸಮನ್ವಯ ಅಸಾಧ್ಯ. ಅಲ್ಲದೆ ರೈಲ್ವೆ ಖಾಸಗೀಕರಣದಿಂದ ಕೃಷಿ ಮತ್ತು ಕೈಗಾರಿಕಾ ವಸ್ತುಗಳ ಸಾಗಾಟಕ್ಕೂ ಹೆಚ್ಚಿನ ದರ ವಿಧಿಸುವ ಸಾಧ್ಯತೆ ಇದೆ. ಇದರಿಂದ ರೈತರು ಮತ್ತು ಸಣ್ಣ ಉದ್ಯಮಿಗಳು ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಅಲ್ಲದೆ ರೈಲ್ವೆಯ ಖಾಸಗೀಕರಣವು ಸಂಪರ್ಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ತಾವು ಪಡೆದುಕೊಂಡ ಮಾರ್ಗದಲ್ಲಿ ನಿರೀಕ್ಷಿಸಿದಷ್ಟು ಲಾಭ ಬರದೇ ಹೋದರೆ ಭವಿಷ್ಯದಲ್ಲಿ ಖಾಸಗಿ ಸಂಸ್ಥೆಗಳು ಅದನ್ನು ಮತ್ತೆ ಸರಕಾರಕ್ಕೆ ಬಿಟ್ಟುಕೊಡುವ ಸಾಧ್ಯತೆ ಇರುತ್ತದೆ. ಖಾಸಗೀಕರಣವೆಂದರೆ ಅದು ಕೇವಲ ಲಾಭ ಮಾತ್ರ. ಅಂದ ಮಾತ್ರಕ್ಕೆ ರೈಲ್ವೆ ಖಾಸಗೀಕರಣದಿಂದ ಸಂಪೂರ್ಣ ಪ್ರಯೋಜನವಿಲ್ಲ ಎಂಬ ಅರ್ಥವಲ್ಲ. ಖಾಸಗೀಕರಣವು ಉತ್ತಮ ಮೂಲಸೌಕರ್ಯಕ್ಕೆ ಕಾರಣವಾಗಬಹುದು ಮತ್ತು ಇದರಿಂದಾಗಿ ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳು ದೊರೆಯಬಹುದು. ಸೇವೆಗಳ ಗುಣಮಟ್ಟದಲ್ಲಿನ ಸುಧಾರಣೆ ಆಗುವ ಅವಕಾಶವಿದೆ. ಇದು ಸ್ಪರ್ಧೆಯನ್ನು ಉತ್ತೇಜಿಸಬಹುದು ಮತ್ತು ಆದ್ದರಿಂದ ರೈಲ್ವೆಯ ಎಲ್ಲಾ ವಿಭಾಗಗಳಲ್ಲಿ ಉತ್ತಮ ಮೇಲ್ವಿಚಾರಣೆಗೆ ಕಾರಣವಾಗಬಹುದು, ಅಪಘಾತಗಳ ಪ್ರಮಾಣ ಕಡಿಮೆಯಾಗಬಹುದು, ಆಧುನಿಕ ತಂತ್ರಜ್ಞಾನ ಭಾರತೀಯ ರೈಲ್ವೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕಾರಣವಾಗಬಹುದು ಎಂಬ ವಾದವಿದೆ. ಆದರೆ ಇವೆಲ್ಲವೂ ಸದ್ಯದ ಮಟ್ಟಿಗೆ ಊಹೆಗಳು ಮಾತ್ರ.ತಜ್ಞರ ಪ್ರಕಾರ ಪ್ರಸ್ತುತ ಸಂದರ್ಭದಲ್ಲಿ ರೈಲ್ವೆಯ ಕೆಲವು ಸೇವೆಗಳನ್ನು ಮಾತ್ರ ಖಾಸಗೀಕರಣಗೊಳಿಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ರೈಲ್ವೆಗೆ ಸಂಬಂಧಿಸಿದ ಆಸ್ತಿಗಳ ಮಾಲಕತ್ವ ಮತ್ತು ನಿರ್ವಹಣೆ ಎಲ್ಲವೂ ಸಂಪೂರ್ಣ ರೈಲ್ವೆ ಸಚಿವಾಲಯದ ಅಡಿಯಲ್ಲಿವೆ ಎನ್ನುತ್ತಾರೆ ತಜ್ಞರು. ಖಾಸಗಿ ಸಂಸ್ಥೆಗಳು ವಿವಿಧ ಸೇವೆಗಳಿಗಾಗಿ ತಾಂತ್ರಿಕವಾಗಿ ಬಿಡ್ ಮಾಡಲು ಸರಕಾರ ಆಹ್ವಾನ ನೀಡಿದಾಗ ನಿಜವಾದ ಖಾಸಗೀಕರಣ ಆರಂಭವಾಗುತ್ತದೆ.

ಇತ್ತೀಚೆಗೆ ಸರಕಾರ ರಚಿಸಿದ್ದ ವಿವೇಕ್‌ದೇವರಾಯ ಸಮಿತಿ ಸಹ ರೈಲ್ವೆ ಖಾಸಗೀಕರಣವನ್ನು ವಿರೋಧಿಸಿದೆ. ಬದಲಾಗಿ ವರದಿ ಭಾರತೀಯ ರೈಲ್ವೆ ಅಭಿವೃದ್ಧಿಗೆ ಕೆಲವು ಸಲಹೆಗಳನ್ನು ನೀಡಿದೆ. ಅದರಲ್ಲಿ ರೈಲ್ವೆ ನಿರ್ವಹಣೆಗೆ ಹೊಸ ಮತ್ತು ಆಧುನಿಕ ಸಾಂಸ್ಥಿಕ ಚೌಕಟ್ಟಿನ ರಚನೆ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡಿಕೆ, ಪ್ರಯಾಣಿಕರಿಗೆ ಗುಣಮಟ್ಟದ ಸೇವೆ, ಸಂಪನ್ಮೂಲಗಳನ್ನು ಹೆಚ್ಚಿಸುವುದು, ವೇಗದ ರೈಲುಗಳ ಬಳಕೆ ಇತ್ಯಾದಿ. ನಿಯಂತ್ರಣ, ಕಾರ್ಯನಿರ್ವಹಣೆ ಮತ್ತು ಸೇವೆ ನೀಡುವಿಕೆ ಇವುಗಳ ವಿಚಾರದಲ್ಲಿ ರೈಲ್ವೆ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದೆ. ಕೆಲವು ತಜ್ಞರು ಖಾಸಗೀಕರಣಗೊಳಿಸುವ ಬದಲು ಸಂಪೂರ್ಣ ರೈಲ್ವೆ ಮಂತ್ರಾಲಯವನ್ನು ರದ್ದುಗೊಳಿಸಿ ರೈಲ್ವೆಯನ್ನು ಸ್ವತಂತ್ರ ಮತ್ತು ಸ್ವ ಅಧಿಕಾರವುಳ್ಳ ಕಾರ್ಪೊರೇಶನ್/ಸರಕಾರಿ ನಿಗಮವನ್ನಾಗಿ(ಉದಾ: ನಮ್ಮ ಕೆಎಸ್‌ಆರ್‌ಟಿಸಿ) ಪರಿವರ್ತಿಸುವುದನ್ನು ವ್ಯಾಪಕವಾಗಿ ಬೆಂಬಲಿಸುತ್ತಾರೆ.

ಭಾರತೀಯ ರೈಲ್ವೆ ತಾನೇ ಹೇಳುವಂತೆ ಒಂದು ರೂಪಾಯಿ ಟಿಕೆಟ್ ದರದಲ್ಲಿ ಕೇವಲ 57 ಪೈಸೆ ಮಾತ್ರ ಇಲಾಖೆಗೆ ಹೋಗುತ್ತದೆ. ಉಳಿದ ಹಣ ನಿರ್ವಹಣೆಗೆ ಸಾಕಾಗುವುದಿಲ್ಲ. ವಿದೇಶಿ ತಜ್ಞರ ಪ್ರಕಾರ ಭಾರತೀಯ ರೈಲ್ವೆಯ ಸಮಸ್ಯೆಗಳೆಂದರೆ ದರ ನಿಗದಿ ವಿಚಾರದಲ್ಲಿ ಯಾವುದೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸದಿರುವುದು ಮತ್ತು ರೈಲ್ವೆ ದರಗಳನ್ನು ನಿಯಂತ್ರಿಸಲು ಯಾವುದೇ ಸ್ವತಂತ್ರ ಮೂರನೇ ಸಂಸ್ಥೆ ಇಲ್ಲದಿರುವುದು. ರೈಲ್ವೆಯನ್ನು ಕೇವಲ ಲಾಭಗಳಿಕೆಯ ವ್ಯಾಪಾರದೃಷ್ಟಿಯಿಂದ ನೋಡುವುದರ ಬದಲಾಗಿ ಅದು ಭಾರತೀಯರ ಸಾರಿಗೆ ಸೇವೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ. ಖಾಸಗೀಕರಣ ಎಂದರೆ ಅದು ಲಾಭದ ದೃಷ್ಟಿಯಿಂದ ಮಾಡಲಾಗಿರುತ್ತದೆ. ಅಲ್ಲಿ ಸೇವೆಗೆ ಅವಕಾಶ ಇರುವುದಿಲ್ಲ. ಈಗ ಮುಖ್ಯವಾಗಿ ಭಾರತೀಯ ರೈಲ್ವೆಗೆ ಒಂದು ವೃತ್ತಿಪರತೆ ಬೇಕಾಗಿದೆ. ರೈಲುಗಳ ವೇಗವನ್ನು ಹೆಚ್ಚು ಮಾಡಬೇಕು. ಎಲ್ಲಾ ಬ್ರಾಡ್‌ಗೇಜ್‌ಗಳನ್ನು ಆದಷ್ಟು ಬೇಗ ವಿದ್ಯುತೀಕರಣ ಮಾಡಬೇಕಾಗಿದೆ. ಈಗಿರುವ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ. ಮುಖ್ಯವಾಗಿ ರೈಲ್ವೆ ಪ್ರಯಾಣಿಕರಿಗೆ ಹೊಸ ರೀತಿಯ ಅನುಭವ ಬೇಕಾಗಿದೆ. ರೈಲ್ವೆ ಸೇವೆಯನ್ನು ಉತ್ತಮಪಡಿಸಲು ಸಾಧ್ಯವಾದಷ್ಟು ಅದನ್ನು ವಿಕೇಂದ್ರೀಕರಣಗೊಳಿಸಬೇಕಿದೆ. ಭಾರತದ ರೈಲ್ವೆಗೆ ಮುಖ್ಯವಾಗಿ ಹೊಸ ರೀತಿಯ ನಾವೀನ್ಯತೆ ಮತ್ತು ತಾಂತ್ರಿಕತೆ ಅವಶ್ಯಕತೆಯಿದೆ.

Writer - ಡಾ. ಡಿ. ಸಿ. ನಂಜುಂಡ

contributor

Editor - ಡಾ. ಡಿ. ಸಿ. ನಂಜುಂಡ

contributor

Similar News