ಬಾಯಿ ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ಹೀಗೆ ಮಾಡಿ

Update: 2020-10-24 18:30 GMT

ಬಾಯಿ ಕ್ಯಾನ್ಸರ್ ಇತರ ಕ್ಯಾನ್ಸರ್‌ಗಳಷ್ಟೇ ಅಪಾಯಕಾರಿಯಾಗಿದೆ. ಬಾಯಿಯಲ್ಲಿರುವ ಹುಣ್ಣುಗಳು ಕ್ಯಾನ್ಸರ್‌ನ್ನು ಸೂಚಿಸಬಹುದು. ಈ ವಿಧದ ಕ್ಯಾನ್ಸರ್ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳ ವರ್ಗಕ್ಕೆ ಸೇರುತ್ತದೆ ಹಾಗೂ ಬಾಯಿ ಮತ್ತು ಗಂಟಲಿನಲ್ಲಿ ಉಂಟಾಗುತ್ತದೆ. ತುಟಿಗಳು, ನಾಲಿಗೆ ಮತ್ತು ಗಂಟಲು ಸೇರಿದಂತೆ ಎಲ್ಲಿಯೂ ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಬಾಯಿ ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪುವ ಮುನ್ನ ಅದನ್ನು ಗುರುತಿಸಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ, ಹೀಗಾಗಿ ಬಾಯಿ ಕ್ಯಾನ್ಸರ್ ಉಂಟಾಗದಂತೆ ತಡೆಯುವುದೇ ಏಕಮಾತ್ರ ಮಾರ್ಗವಾಗಿದೆ. ಬಾಯಿ ಕ್ಯಾನ್ಸರ್‌ನ್ನು ತಡೆಯಲು ಕೆಲವು ಟಿಪ್ಸ್ ಇಲ್ಲಿವೆ.

*ಆಹಾರದಲ್ಲಿ ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳಿರಲಿ

ಸಾಮಾನ್ಯವಾಗಿ ನಾವು ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಕುಂಬಳ,ಕ್ಯಾರೆಟ್ ಇತ್ಯಾದಿಗಳು ಆರೋಗ್ಯಕ್ಕೆ ಪೂರಕವಾದ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿವೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಕೆಲವು ಪೋಷಕಾಂಶಗಳು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತವೆ.

*ಬಿಸಿಲಿನಿಂದ ತುಟಿಗಳನ್ನು ರಕ್ಷಿಸಿಕೊಳ್ಳಿ

ನೀವು ಮುಖವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ಬಳಸುತ್ತಿರಬಹುದು,ಆದರೆ ತುಟಿಗಳ ಗತಿಯೇನು? ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು ತುಟಿಗಳಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಇದು ನಂತರ ಕ್ಯಾನ್ಸರ್‌ಗೆ ಕಾರಣವಾಗಬಹುದು. ನೀವು ಬಿಸಿಲಿನಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದರೆ ತುಟಿಗಳಿಗೂ ಸನ್‌ಸ್ಕ್ರೀನ್ ಬಳಸಿ. ತುಟಿಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವ ಹಲವಾರು ಲಿಪ್‌ಬಾಮ್‌ಗಳು ಮತ್ತು ಲಿಪ್‌ಸ್ಟಿಕ್‌ಗಳಿವೆ.

* ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ

ಹಲ್ಲುಗಳ ಆರೋಗ್ಯ ಸುಸ್ಥಿತಿಯಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನಿಯಮಿತವಾಗಿ ದಂತಪರೀಕ್ಷೆಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ದಂತಕುಳಿ,ಹಲ್ಲುಗಳು ಹಳದಿಯಾಗುತ್ತಿರುವುದು ಅಥವಾ ಇತರ ದಂತ ಸಮಸ್ಯೆಗಳನ್ನು ಗುರುತಿಸಲು ಇಂತಹ ಪರೀಕ್ಷೆಗಳು ನೆರವಾಗುತ್ತವೆ. ದಂತವೈದ್ಯರು ನಿಮ್ಮ ಬಾಯಿಯಲ್ಲಿ ಕ್ಯಾನ್ಸರ್ ಹುಣ್ಣುಗಳು ಇವೆಯೇ ಎನ್ನುವುದನ್ನು ಗುರುತಿಸುವ ಮೊದಲ ವ್ಯಕ್ತಿಯಾಗಿರುತ್ತಾರೆ,ಹೀಗಾಗಿ ಕನಿಷ್ಠ ವರ್ಷಕ್ಕೊಮ್ಮೆಯಾದರೂ ದಂತವೈದ್ಯರನ್ನು ಭೇಟಿಯಾಗಬೇಕು.

*ಮದ್ಯಪಾನ ಬೇಡ

ಮದ್ಯವು ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಗಳಲ್ಲಿ ನೇರ ದುಷ್ಪರಿಣಾಮ ಬೀರುವ ಸಂಗತಿಗಳಲ್ಲೊಂದಾಗಿದೆ. ಅದು ಯಕೃತ್ತಿಗೆ ಹಾನಿಯನ್ನುಂಟು ಮಾಡುವುದಷ್ಟೇ ಅಲ್ಲ,ಬಾಯಿ ಕ್ಯಾನ್ಸರ್ ಸೇರಿದಂತೆ ಇತರ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಮದ್ಯಪಾನದ ಚಟವಿರುವವರು ಅದನ್ನು ವರ್ಜಿಸುವುದು ಒಳ್ಳೆಯದು.

*ಧೂಮ ಪಾನವನ್ನು ಬಿಟ್ಟುಬಿಡಿ

ತಂಬಾಕು ಬಾಯಿ ಕ್ಯಾನ್ಸರ್‌ಗೆ ಮುಖ್ಯಕಾರಣವಾಗಿರುವುದರಿಂದ ಧೂಮಪಾನವು ಬಹುಶಃ ಮದ್ಯಪಾನಕ್ಕಿಂತ ಹೆಚ್ಚು ಅಪಾಯಕಾರಿಯಾದ ದುಶ್ಚಟವಾಗಿದೆ. ಚೈನ್ ಸ್ಮೋಕರ್‌ಗಳು ಅಥವಾ ಎಡೆಬಿಡದೆ ಧೂಮ್ರಪಾನ ಮಾಡುವವರು ಬಾಯಿ ಕ್ಯಾನ್ಸರ್‌ಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಧೂಮ್ರಪಾನ ವರ್ಜನೆಯು ಮಾರಣಾಂತಿಕ ಕ್ಯಾನ್ಸರ್‌ನಿಂದ ವ್ಯಕ್ತಿಯನ್ನು ಉಳಿಸಬಲ್ಲದು.

*ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಕೂಡ ಅಷ್ಟೇ ಅಪಾಯಕಾರಿ

ಇತರರು ಧೂಮ್ರಪಾನ ಮಾಡುತ್ತಿರುವಾಗ ಅದರ ಹೊಗೆಯನ್ನು ಸೇವಿಸುವವರೂ ಧೂಮ್ರಪಾನಿಗಳಷ್ಟೇ ಅಪಾಯವನ್ನು ಎದುರಿಸುತ್ತಿರುತ್ತಾರೆ ಮತ್ತು ಅವರೂ ಬಾಯಿ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಸ್ನೇಹಿತರು ಧೂಮ್ರಪಾನಿಗಳಾಗಿದ್ದಲ್ಲಿ ಅವರು ಸೇದಿ ಬಿಟ್ಟ ಹೊಗೆಯನ್ನು ನೀವು ಸೇವಿಸದಂತೆ ಜಾಗ್ರತೆ ವಹಿಸಿ.

*ಬ್ರಷಿಂಗ್ ಮತ್ತು ಫ್ಲಾಸಿಂಗ್

ನಿಮ್ಮ ಹಲ್ಲುಗಳನ್ನು ನಿಯಮಿತವಾಗಿ ಬ್ರಷ್ ಮಾಡುವುದು ಮಾತ್ರವಲ್ಲ,ಅವುಗಳ ಪ್ಲಾಸಿಂಗ್ ಕೂಡ ಬಾಯಿಯ ಆರೋಗ್ಯಕ್ಕೆ ಲಾಭದಾಯಕವಾಗಿದೆ. ದಿನಕ್ಕೆರಡು ಬಾರಿ ಬ್ರಷಿಂಗ್ ಮತ್ತು ಕನಿಷ್ಠ ಒಂದು ಬಾರಿ ಫ್ಲಾಸಿಂಗ್ ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುವುದು ಮಾತ್ರವಲ್ಲ, ಕ್ಯಾನ್ಸರ್‌ನಂತಹ ದಂತ ಸಮಸ್ಯೆಗಳನ್ನೂ ದೂರವಿರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News