ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ, ಡಿಕೆಶಿ ಕಾರಣ: ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪ

Update: 2020-10-26 13:58 GMT

ಬೆಂಗಳೂರು, ಅ.26: ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಆರೋಪ ಮಾಡಿದ್ದಾರೆ.

ನಗರದ ಬಿಜೆಪಿ ಮಹಾಘಟಕದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಯ್ದೆಗಳನ್ನು ವಿರೋಧಿಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸಿಗರು ಕೆಲವು ಬಾಡಿಗೆ ಭಂಟರನ್ನು ಕರೆತಂದರು. ಮಾರುತಿ ಮಾನ್ಪಡೆ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರ ಪರಿಣಾಮ ಕೊರೋನ ಸೋಂಕು ತಗುಲಿ ಸಾವನ್ನಪ್ಪಿದರು. ಇದಕ್ಕೆ ಡಿ.ಕೆ.ಶಿವಕುಮಾರ್ ಅವರೇ ಕಾರಣಕರ್ತರು ಎಂದು ದೂರಿದರು.

ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ರೈತರನ್ನು ಬೀದಿಗೆ ತಂದು ನಿಲ್ಲಿಸಿದರು. ಇದರಿಂದ ಕೊರೋನ ಸೋಂಕು ಹಬ್ಬಿತು ಎಂದು ಕಿಡಿಕಾರಿದರು

ಸುಮ್ಮನಿದ್ದ ರೈತರನ್ನು ಹಳ್ಳಿಯಿಂದ ಕರೆತಂದಿದ್ದೇ ಕಾಂಗ್ರೆಸಿಗರು. ರೈತರು ಬರುವುದಿಲ್ಲ ಎಂದಾಗ ಬಾಡಿಗೆಗೆ ಕರೆತರಲಾಯಿತು. ಪ್ರತಿಭಟನೆ ನಡೆಸಿ ಕೊರೋನ ಸೋಂಕು ಹಬ್ಬಿಸಿದಿರಿ. ಯಾವ ಪುರುಷಾರ್ಥಕ್ಕೆ ಹೋರಾಟ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಪ್ರಸ್ತುತ ನಡೆಯುತ್ತಿರುವ ಎರಡು ವಿಧಾನಸಭೆ ಹಾಗೂ ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವ ಸಂಶಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿರುವ ಸಾಧನೆಗಳ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News