ಮೂರೂ ಧರ್ಮಗಳ ಧಾರ್ಮಿಕ ಚಿತ್ರ ಇಟ್ಟು ಶಾಸಕಿ ಸೌಮ್ಯಾ ರೆಡ್ಡಿ ಪೂಜೆ: ಬಿಸಿಬಿಸಿ ಚರ್ಚೆ

Update: 2020-10-26 15:25 GMT
Photo: Twitter(@Sowmyareddyr)

ಬೆಂಗಳೂರು, ಅ.26: ನವರಾತ್ರಿ ಹಬ್ಬದ ಸಮಯದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮೂರು ಧರ್ಮಗಳ ಧಾರ್ಮಿಕ ಚಿತ್ರ ಇಟ್ಟು ಪೂಜೆ ಮಾಡಿರುವುದು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಶಾಸಕಿ ಸೌಮ್ಯ ರೆಡ್ಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಆಯುಧ ಪೂಜೆಯ ಚಿತ್ರಗಳನ್ನು ಹಂಚಿಕೊಂಡಿದ್ದರು. ಜೊತೆಗೆ "ಜಯನಗರದ ಶಾಸಕರ ಕಚೇರಿಯಲ್ಲಿ, ನನ್ನ ತಂದೆ ಬಿಟಿಎಂ ಶಾಸಕರಾದ ರಾಮಲಿಂಗಾರೆಡ್ಡಿ ಜೊತೆ ಆಯುಧ ಪೂಜೆ ನೆರವೇರಿಸಿ, ಪವಿತ್ರ ಸಂವಿಧಾನ ಗ್ರಂಥಕ್ಕೆ ಪೂಜೆ ಸಲ್ಲಿಸಲಾಯಿತು" ಎಂಬ ಒಕ್ಕಣೆಯನ್ನು ಸೇರಿಸಿಕೊಂಡಿದ್ದರು.

ಶಾಸಕಿ ಸೌಮ್ಯಾ ರೆಡ್ಡಿ ನಡೆಗೆ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಆಕ್ಷೇಪವೆತ್ತಿದ್ದು, ಮುಂದಿನ ಕ್ರಿಸ್ಮಸ್‍ಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಈದ್‍ಗೆ ಗಣಹೋಮ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಮಾಳವಿಕಾ ಟ್ವೀಟ್‍ಗೆ ಗರಂ ಆಗಿರುವ ಸೌಮ್ಯಾ ರೆಡ್ಡಿ, "ನೀವು ಕೋವಿಡ್ ಟಾಸ್ಕ್ ಫೋರ್ಸ್ ಸರಿಯಾಗಿ ನೋಡಿಕೊಳ್ಳಿ ಮೊದಲು, 8 ಲಕ್ಷಕ್ಕೂ ಹೆಚ್ಚು ಸೋಂಕಿತರು ಇದ್ದಾರೆ, 10,905 ಸಾವು ಸಂಭವಿಸಿದೆ ನಾಚಿಕೆಯಾಗುವುದಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.

ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮೀರಾ ರಾಘವೇಂದ್ರ ಎಂಬವರು ಟ್ವೀಟ್ ಮಾಡಿದ್ದು, ಈ ತರದ ಆಚರಣೆ ಬೇಕಿತ್ತಾ ಅಪ್ಪಾ ಮಗಳಿಗೆ!? ಇಸ್ಲಾಂನಲ್ಲಿ ಮಂಗಳಾರತಿಗೆ ಅವಕಾಶ ಇದ್ಯಾ!? ಇದನ್ನು ಮುಸ್ಲಿಮರು ಒಪ್ಪುವರೇ, ವಿರೋಧಿಸುವರೇ!? ಅಥವಾ ಕಾಂಗ್ರೆಸಿಗರು ಏನೇ ಮಾಡಿದ್ರು ಓಕೆ ಎನ್ನುವರೇ!? ಬಾಯಿ ಬಿಟ್ಟು ಮೌಲ್ವಿಗಳು ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News