ಬೆಂಗಳೂರು : ವಿಹಿಂಪ, ಬಜರಂಗ ದಳದಿಂದ ನಡೆದ ಮಾರಕಾಸ್ತ್ರಗಳಿಗೆ ಆಯುಧ ಪೂಜೆಯಲ್ಲಿ ಎಸಿಪಿ ಭಾಗಿ !

Update: 2020-10-26 17:23 GMT

ಬೆಂಗಳೂರು, ಅ.26: ವಿಜಯದಶಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆದ ಮಾರಕಾಸ್ತ್ರಗಳ ಪ್ರದರ್ಶನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ರವಿವಾರ ಬೆಂಗಳೂರಿನ ಬಜರಂಗದಳದ ಕೇಂದ್ರ ಕಚೇರಿಯಲ್ಲಿ ನಡೆದ ಆಯುಧ ಪೂಜೆಯ ಕಾರ್ಯಕ್ರಮದಲ್ಲಿ ಹಲವಾರು ದೊಡ್ಡದಾದ ತಲವಾರುಗಳು, ಚೂರಿ, ಚಾಕುಗಳು ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟು, ಪ್ರದರ್ಶನ ಮಾಡಲಾಗಿದೆ. ಈ ವೇಳೆ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಕೆ.ಎನ್.ರಮೇಶ್ ಪಾಲ್ಗೊಂಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ನಡೆದಿರುವ ಮಾರಕಾಸ್ತ್ರಗಳ ಪೂಜೆ, ಪ್ರದರ್ಶನದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಬಾಂಬೆ ಪೊಲೀಸ್ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ, ಅಮಾನತು ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News