100ಕ್ಕೂ ಅಧಿಕ ಕಳವು ಪ್ರಕರಣಗಳ ಆರೋಪಿ ಮುರುಗನ್ ಸಾವು

Update: 2020-10-27 12:35 GMT

ಬೆಂಗಳೂರು, ಅ.27: 100ಕ್ಕೂ ಅಧಿಕ ಕಳವು ಪ್ರಕರಣಗಳ ರೂವಾರಿ ಆಗಿದ್ದ ಆರೋಪಿ ಮುರುಗನ್ ಕ್ಯಾನ್ಸರ್ ಕಾಯಿಲೆಯಿಂದಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ದರೋಡೆ, ಚಿನ್ನದಂಗಡಿಗಳ ಕಳ್ಳತನ ಆರೋಪ ಸಂಬಂಧ ಮುರುಗನ್ ಮೇಲೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಮೊಕದ್ದಮೆ ದಾಖಲಾಗಿವೆ.

ಮುಖ್ಯವಾಗಿ 2019ರಲ್ಲಿ ತಿರುಚಿನಾಪಲ್ಲಿಯ ಲಲಿತ್ ಜ್ಯುವೆಲ್ಲರ್ಸ್ ನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಮುರುಗನ್ ಕಿಂಗ್‍ಪಿನ್ ಆಗಿದ್ದ. ಈ ಜ್ಯುವೆಲ್ಲರ್ಸ್ ನಲ್ಲಿ ಸುಮಾರು 12 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ ಹಾಗೂ ಪ್ಲಾಟಿನಂ ಒಡವೆಗಳು ಕಳ್ಳತನವಾಗಿತ್ತು.

ಇತ್ತೀಚಿಗೆ ಬೆಂಗಳೂರಿನಲ್ಲಿ ಮುರುಗನ್ ಪೊಲೀಸರಿಗೆ ಶರಣಾಗಿದ್ದು, ಈ ವೇಳೆ ಆರೋಪಿಯಿಂದ ಪೊಲೀಸರು 10 ಕೆ.ಜಿ ಚಿನ್ನ ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ಈತನ ಮೇಲೆ 100ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ತದನಂತರ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಆದರೆ ಜೈಲ್‍ನಲ್ಲಿದ್ದ ವೇಳೆ ಮುರುಗನ್‍ಗೆ ಕ್ಯಾನ್ಸರ್ ಉಲ್ಪಣಗೊಂಡಿತ್ತು. ಹೀಗಾಗಿ ಜಯನಗರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News