ಇಸ್ಲಾಮ್‌ಗೂ ಭಯೋತ್ಪಾದನೆಗೂ ನಂಟು ಕಲ್ಪಿಸುವ ಯತ್ನಗಳಿಗೆ ಸೌದಿ ಖಂಡನೆ

Update: 2020-10-27 16:12 GMT

ರಿಯಾದ್ (ಸೌದಿ ಅರೇಬಿಯ), ಅ. 27: ಇಸ್ಲಾಮ್ ಧರ್ಮಕ್ಕೂ ಭಯೋತ್ಪಾದನೆಗೂ ನಂಟು ಕಲ್ಪಿಸುವ ಯಾವುದೇ ಪ್ರಯತ್ನವನ್ನು ಸೌದಿ ಅರೇಬಿಯ ತಿರಸ್ಕರಿಸುತ್ತದೆ ಹಾಗೂ ಪ್ರವಾದಿಯ ಕಾರ್ಟೂನ್‌ಗಳನ್ನು ಖಂಡಿಸುತ್ತದೆ ಎಂದು ಆ ದೇಶದ ಸರಕಾರ ಹೇಳಿದೆ.

 ಪ್ರವಾದಿಯ ವ್ಯಂಗ್ಯಚಿತ್ರವನ್ನು ಪ್ರಕಟಿಸುವ ಹಕ್ಕನ್ನು ಫ್ರಾನ್ಸ್ ಬೆಂಬಲಿಸಿದ ಬಳಿಕ, ಆ ದೇಶ ಮತ್ತು ಕೆಲವು ಮುಸ್ಲಿಮ್ ಬಾಹುಳ್ಯದ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೌದಿ ಅರೇಬಿಯ ಈ ಹೇಳಿಕೆ ನೀಡಿದೆ.

‘‘ಬೌದ್ಧಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಗೌರವ, ಸಹಿಷ್ಣುತೆ ಮತ್ತು ಶಾಂತಿಯ ದ್ಯೋತಕವಾಗಿರಬೇಕು ಹಾಗೂ ದ್ವೇಷ, ಹಿಂಸೆ ಮತ್ತು ಉಗ್ರವಾದವನ್ನು ಸೃಷ್ಟಿಸುವ ಹಾಗೂ ಸಹಬಾಳ್ವೆಯ ಮೌಲ್ಯಗಳಿಗೆ ವಿರುದ್ಧವಾಗಿರುವ ಅಭ್ಯಾಸಗಳು ಮತ್ತು ಕೃತ್ಯಗಳನ್ನು ತಿರಸ್ಕರಿಸಬೇಕು’’ ಎಂದು ಸೌದಿ ಅರೇಬಿಯದ ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.

ಭಯೋತ್ಪಾದಕ ಕೃತ್ಯಗಳನ್ನು ಯಾರೇ ಮಾಡಿದರೂ ಅವುಗಳನ್ನು ಸೌದಿ ಅರೇಬಿಯ ಖಂಡಿಸುತ್ತದೆ ಎಂದು ಅವರು ಹೇಳಿದರು. ಈ ತಿಂಗಳು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ತರಗತಿಯೊಂದರಲ್ಲಿ ಪ್ರವಾದಿಯ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕರೊಬ್ಬರನ್ನು ವ್ಯಕ್ತಿಯೊಬ್ಬ ತಲೆಕಡಿದು ಕೊಂದ ಘಟನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರವಾದಿಯ ವ್ಯಂಗ್ಯಚಿತ್ರಗಳಿಗೆ ಮುಸ್ಲಿಮ್ ಜಗತ್ತಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಹಲವು ಅರಬ್ ವ್ಯಾಪಾರ ಸಂಘಟನೆಗಳೂ ಫ್ರಾನ್ಸ್‌ನ ಉತ್ಪನ್ನಗಳಿಗೆ ಬಹಿಷ್ಕಾರ ಹಾಕುವುದಾಗಿ ಘೋಷಿಸಿವೆ.

ಇರಾಕ್, ಟರ್ಕಿ ಮತ್ತು ಗಾಝಾ ಪಟ್ಟಿಯಲ್ಲಿ ಫ್ರಾನ್ಸ್ ವಿರುದ್ಧ ಪ್ರತಿಭಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News