ಮಹಿಳೆಯರಿಗೆ ಧ್ವನಿಯಾಗಿ ನಿಲ್ಲಲು ಒಂದು ಅವಕಾಶ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

Update: 2020-10-27 17:15 GMT

ಬೆಂಗಳೂರು, ಅ.27: ಮಹಿಳೆಯರಿಗೆ ಧ್ವನಿಯಾಗಿ ನಿಲ್ಲಲು, ನಿಮ್ಮ ಹೋರಾಟಗಳಲ್ಲಿ ಕೈಜೋಡಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ಒಂದು ಅವಕಾಶ ಕೇಳಿಕೊಂಡು ನಿಮ್ಮ ಬಳಿ ಬಂದಿದ್ದೀನಿ. ನಿಮ್ಮ ಮಗಳನ್ನು ಕಾಣುವಂತೆ ನನ್ನನ್ನೂ ಕಂಡು ಪ್ರೋತ್ಸಾಹಿಸಿ, ಆಶೀರ್ವದಿಸಿ ಗೆಲ್ಲಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ಅವರು ಮನವಿ ಮಾಡಿದ್ದಾರೆ.       

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದ ಎಚ್‍ಎಂಟಿ ಬಡಾವಣೆ, ಯಶವಂತಪುರ ಬಡಾವಣೆ ಸೇರಿದಂತೆ ವಿವಿಧೆಡೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿ ಕುಸುಮಾ ಅವರ ಜತೆ ಪ್ರಚಾರ ನಡೆಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರು ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಪ್ರಚಾರದ ವೇಳೆ ಮಾತನಾಡಿದ ಕುಸುಮಾ ಅವರು, ನಾನು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕ್ಷೇತ್ರದ ಕಡೆಯ ಪ್ರಜೆಗೂ ನ್ಯಾಯ ಒದಗಿಸಿಕೊಡಬೇಕು. ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಲು ನಿಮ್ಮ ಮನೆ ಮಗಳಾಗಿ ನಿಮ್ಮ ಮನೆ ಬಾಗಿಲ ಮುಂದೆ ಬಂದು ಮತಯಾಚಿಸುತ್ತಿದ್ದೇನೆ.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇನೆ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಸ್ವಾಭಿಮಾನದ ಮತವನ್ನು ನನಗೆ ಕೊಡಿ. ನವೆಂಬರ್ 3ರಂದು ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News