ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಅಡ್ಡಿ: ಪಾಲಿಕೆ ಮಾಜಿ ಸದಸ್ಯ ಬಂಧನ, ಬಿಡುಗಡೆ

Update: 2020-10-28 16:08 GMT

ಬೆಂಗಳೂರು, ಅ.28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರು ಅಡ್ಡಿಪಡಿಸಿದ್ದಾರೆ ಎನ್ನಲಾದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಯಶವಂತಪುರ ಠಾಣೆ ಪೊಲೀಸರು, ಬುಧವಾರ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್ ಅವರನ್ನು ಬಂಧಿಸಿ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಯಶವಂತಪುರದ ಬಿಕೆ ನಗರದಲ್ಲಿ ಕುಸುಮಾ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸುವ ವೇಳೆ ಪ್ರಧಾನಿ ಮೋದಿ ಪರವಾಗಿ ಕೆಲವರು ಘೋಷಣೆ ಹಾಕಲು ಆರಂಭಿಸಿದ್ದಾರೆ ಹಾಗೂ ಸಿದ್ದರಾಮಯ್ಯ ಅವರ ವಾಹನ ಮುಂದೆ ಹೋಗದಂತೆ ತಡೆದಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ಪೊಲೀಸರಿಗೆ ಪ್ರಚಾರಕ್ಕೆ ಅಡ್ಡಿಪಡಿಸಿದವರನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್, ಭರತ್ ಸಿಂಗ್, ಕೊತ್ತಂಬರಿ ನಾಗ, ಖಾಜಾ, ರತ್ನಮ್ಮ ಇತರೆ ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿ ಮಾಡಿದಲ್ಲದೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದ್ದು, 9 ಮಂದಿ ವಿರುದ್ಧ ಯಶವಂತಪುರ ಠಾಣೆಯಲ್ಲಿ 506, 341 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬುಧವಾರ ಜಿ.ಕೆ.ವೆಂಕಟೇಶ್‍ರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News