ಕಳವು ಪ್ರಕರಣ: 8.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-10-28 12:45 GMT

ಬೆಂಗಳೂರು, ಅ.28: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಇಲ್ಲಿನ ಸಂಜಯನಗರ ಠಾಣಾ ಪೊಲೀಸರು 8.37 ಲಕ್ಷ ಮೌಲ್ಯದ 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಕೋರಮಂಗಲದ ರಾಜೇಂದ್ರನಗರದ ಶೇಖ್‍ಬಾಬಾ(24) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಕಳೆದ ಮಾರ್ಚ್ ನಲ್ಲಿ ದೀಪ್ಷಿಕಾ ಜಾ ಅವರು ಕುಟುಂಬ ಸಮೇತ ಭುವನೇಶ್ವರಕ್ಕೆ ತೆರಳಿದ್ದು, ವಾಪಸ್ ಬಂದು ನೋಡಿದಾಗ ಮನೆ ಬಾಗಿಲು ಒಡೆದು ಮನೆಯಲ್ಲಿಟ್ಟಿದ್ದ 20 ಲಕ್ಷ ಮೌಲ್ಯದ 499 ಗ್ರಾಂ ತೂಕದ ಚಿನ್ನಾಭರಣ, ಎರಡು ಕ್ಯಾಮರಾ, ಒಂದು ಸಿಸಿಟಿವಿ ಡಿವಿಆರ್ ಮತ್ತಿತರ ವಸ್ತುಗಳನ್ನು ಕಳವು ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆಗಿಳಿದ ಸಂಜಯನಗರ ಪೊಲೀಸರು, ಶೇಖ್ ಬಾಬಾನನ್ನು ಬಂಧಿಸಿದ್ದಾರೆ.

ಬಂಧಿತನ ವಿರುದ್ಧ 2013-14ನೆ ಸಾಲಿನಲ್ಲಿ ಕೋರಮಂಗಲ, ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮೂರೂ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದು, ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News