ಸಂಚಾರ ನಿಯಮ ಉಲ್ಲಂಘನೆ: 3.63 ಕೋಟಿ ರೂ. ದಂಡ ವಸೂಲಿ

Update: 2020-10-28 12:46 GMT

ಬೆಂಗಳೂರು, ಅ.28: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಕಳೆದ ಏಳು ದಿನದಲ್ಲಿ ಒಟ್ಟು 3.63 ಕೋಟಿ ರೂ. ದಂಡವನ್ನು ನಗರದ ಸಂಚಾರ ಪೊಲೀಸರು ಸಂಗ್ರಹಿಸಿದ್ದಾರೆ.

ಹೆಲ್ಮೆಟ್ ಧರಿಸದೆ ಸಂಚಾರ ಸೇರಿದಂತೆ ಇನ್ನಿತರೆ ನಿಯಮ ಉಲ್ಲಂಘನೆ ಆರೋಪದಡಿ ವಾಹನ ಚಾಲಕರಿಂದ ಸಂಚಾರ ಪೊಲೀಸರು ಕಳೆದ ಅ.19ರಿಂದ 25ರವರೆಗೆ 3.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿರುವ ಬಗ್ಗೆ 28,201 ಪ್ರಕರಣಗಳು ದಾಖಲಾಗಿದ್ದು, 1.02 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವ ಬಗ್ಗೆ 17,105 ಪ್ರಕರಣಗಳು ದಾಖಲಾಗಿದ್ದು, 62.38 ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.

ಅದೇ ರೀತಿ, ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದ 4,827 ಪ್ರಕರಣಗಳು ದಾಖಲಾಗಿದ್ದು, 22,92 ಲಕ್ಷ ರೂ. ದಂಡ ಸಂಗ್ರಹ ಹಾಗೂ ನಿಷೇಧಿತ ರಸ್ತೆಗಳಲ್ಲಿ ಸಂಚಾರ ಮಾಡಿರುವ 3,790 ಪ್ರಕರಣಗಳಿಂದ 14.45 ಲಕ್ಷ ರೂ. ಮತ್ತು ಸಂಚಾರ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿರುವ 2,448 ಪ್ರಕರಣಗಳಿಂದ 16.83 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News