ನಿರ್ಮಾಪಕ ಮುನಿರತ್ನಗೆ ಕಣ್ಣೀರು ಹಾಕೋದು ಗೊತ್ತು, ಹಾಕಿಸೋದೂ ಗೊತ್ತು: ಸಂಸದ ಡಿ.ಕೆ.ಸುರೇಶ್

Update: 2020-10-28 14:03 GMT

ಬೆಂಗಳೂರು, ಅ.28: ಚಲನಚಿತ್ರದ ನಿರ್ಮಾಪಕರಾಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಕಣ್ಣೀರು ಹಾಕೋದು ಗೊತ್ತು. ಹಾಕ್ಸೋದು ಇನ್ನೂ ಚೆನ್ನಾಗಿ ಗೊತ್ತಿದೆ. ಯಾವ್ಯಾವ ಸಮಯದಲ್ಲಿ ಯಾವ್ಯಾವ ಸೀನ್, ಯಾವಾಗ ಕಟ್ ಮಾಡ್ಬೇಕು, ಯಾವಾಗ್ ಜೋಡಿಸಬೇಕು ಅನ್ನೋದು ಅವರಿಗೆ ಗೊತ್ತಿದೆ. ಅದರಲ್ಲಿ ಸಾಕಷ್ಟು ಅನುಭವ ಇದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.

ಬುಧವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಮತಯಾಚನೆ ಮಾಡಿದ ಅವರು, ಮುನಿರತ್ನ ಈಗ ಡ್ರಾಮಾ ಶುರು ಮಾಡಿದ್ದಾರೆ. ಹೊಸ ಅವತಾರ. ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಇದೇ ಮುನಿರತ್ನ. ಯಾಕೆ ಅವರಿಗೆ ಮರೆತೋಗಿದ್ಯಾ? ಆದರೆ ಕ್ಷೇತ್ರದ ಜನರು ಮರೆತಿಲ್ಲ ಎಂದರು.

ಯಾಕಂದ್ರೆ ಕಟ್ ಅಂಡ್ ಪೇಸ್ಟ್ ಮಾಡೋದು ಮುನಿರತ್ನ ಅಭ್ಯಾಸ. ಹೀಗಾಗಿ ಮರೆತೋಗಿರಬಹುದು. ಅವರ ಮಾತುಗಳನ್ನು ಅವರೇ ಮರೆತು ಬಿಟ್ಟಿದ್ದಾರೆ. ನಿಮಗೆ (ಮುನಿರತ್ನ) ಯಾವಾಗ ಯಾರನ್ನ ಅಳಿಸಬೇಕು, ಯಾವಾಗ ಒದಿಯಬೇಕು ಅನ್ನೋದು ತುಂಬಾ ಚೆನ್ನಾಗಿ ಗೊತ್ತಿದೆ. ಜನ ನಿಮಗೆ ಬುದ್ದಿ ಕಲಿಸುತ್ತಾರೆ. ಅವರಿಗೆ ಈಗ ಕಾಂಗ್ರೆಸ್ ತಾಯಿ ಮರೆತು ಹೋಗಿದೆ. ರಕ್ತ ಬದಲಾಗಿದೆ. ಕೆಂಪು ಹೋಗಿ ಈಗ ಕೇಸರಿ ಆಗಿದೆ ಎಂದು ಅವರು ದೂರಿದರು.

ನಾವು ವೈಯಕ್ತಿಕ ನಿಂದನೆ ಮಾಡಲ್ಲ. ನಮಗೂ ಜವಾಬ್ದಾರಿ ಇದೆ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರಿಗೆ, ಮಂತ್ರಿ ಮಂಡಲದ ಒಕ್ಕಲಿಗ ಸಚಿವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದರು.

ಅಶೋಕ್ ಅವರು ಏಸು ಪ್ರತಿಮೆ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಡ್ರಾಮಾ ಆದ್ಮೇಲೆ ಎಲ್ಲದಕ್ಕೂ ಉತ್ತರ ಕೊಡ್ತೀವಿ. ಈಗ ಸದ್ಯಕ್ಕೆ ಕುಸುಮಾ ಮತ್ತು ಮುನಿರತ್ನ ವಿಚಾರ ಅಷ್ಟೇ ಎಂದು ಸುರೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News