ನಮಗೆ ಯಾವತ್ತಿದ್ದರೂ ಜನಗಳೇ ಗಾಡ್‍ಫಾದರ್: ಎಚ್.ಡಿ.ಕುಮಾರಸ್ವಾಮಿ

Update: 2020-10-28 14:15 GMT

ಬೆಂಗಳೂರು, ಅ.28: ಜೆಡಿಎಸ್ ಬಗ್ಗೆ ಯಾವತ್ತಿಗೂ ಲಘುವಾಗಿ ಮಾತನಾಡಬೇಡಿ, 2018ರಲ್ಲಿ ನನ್ನ ಬಗ್ಗೆ ಲಘುವಾಗಿ ಮಾತನಾಡಿ ಬಳಿಕ ನನ್ನ ಮನೆ ಬಾಗಿಲಿಗೆ ಬಂದು ನೀವೆ ಮುಖ್ಯಮಂತ್ರಿ ಆಗಿ ಎಂದು ಬೇಡಿಕೊಂಡಿರುವುದು ನೆನಪಿರಲಿ. ಈ ಪಕ್ಷಕ್ಕೆ ಲಕ್ಷಾಂತರ ಬಡವರ ಶ್ರೀರಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ರಾಜರಾಜೇಶ್ವರಿ ನಗರ ವಾರ್ಡ್‍ನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್‍ಗೆ ಮುನಿರತ್ನ ನಿಮ್ಮ ಗಾಡ್‍ಫಾದರ್ ಅಲ್ವಾ ಎಂದು ಕೇಳಿದ್ರಂತೆ, ಅವನ್ಯಾರು ನಮಗೆ ಗಾಡ್‍ಫಾದರ್ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್‍ಫಾದರ್ ಅಂದರೆ ಜನಗಳೇ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್ ಸರಕಾರ ಎಂದರು, ಕಾಂಗ್ರೆಸ್‍ನವರು ಬಿಜೆಪಿ ಸರಕಾರವನ್ನು 10 ಪರ್ಸೆಂಟ್ ಸರಕಾರ ಎಂದರು. ಆದರೆ, ನಮ್ಮ ಸರಕಾರವನ್ನು ಯಾರೂ ಪರ್ಸೆಂಟೇಜ್ ಸರಕಾರ ಎಂದಿಲ್ಲ. ಬೆಂಗಳೂರು ಹಾಗೂ ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರತಿಫಲವೆ ಆರ್.ಆರ್.ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಅವರು ಹೇಳಿದರು.

ಇವತ್ತು ಮೋದಿಯವರು ಭಾರತವನ್ನು ಬಾಂಗ್ಲಾದೇಶದ ಜೊತೆ ತಲಾ ಆದಾಯದಲ್ಲಿ ಪೈಪೋಟಿ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಕೊರೋನ ಕಾಲದಲ್ಲಿ ದೀಪ ಬೆಳಗಿಸಿ, ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದರು. ಆದರೆ, ಬಿಜೆಪಿಯವರು ತಮ್ಮ ಮನೆಗೆ ದೀಪ ಬೆಳಗಿಸಿಕೊಂಡರೆ ಹೊರತು ಜನರ ಜೀವನಕ್ಕೆ ದೀಪ ಬೆಳಗಿಸಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಇನ್ನು, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಕುಮಾರಣ್ಞನವರು ಈ ಕ್ಷೇತ್ರಕ್ಕೆ 450 ಕೋಟಿ ರೂ.ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರ ಮುಖ ನೋಡಿ ಜೆಡಿಎಸ್‍ಗೆ 65 ಸಾವಿರ ಮತ ಬಿದ್ದಿದ್ದಿಲ್ಲ. ರಾಮಚಂದ್ರಪ್ಪ ಅಂತ ಹೆಸರು ಇಟ್ಕೊಂಡು ರಾವಣನ ಕೆಲಸ ಅವರು ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದು ತಪ್ಪಾ? ಮಾರಾಟ ಆಗಿರೋರು ನಾವಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‍ನವರು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ಅನ್ನದಾನಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಗಳೂರಿಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಕುಮಾರಣ್ಣನಿಗೆ ಯಾರು ಸಾಟಿಯಿಲ್ಲ. ಅವರು ನೀಡಿದಂತಹ ಯೋಜನೆಗಳನ್ನು ಮತ್ತಾರಿಗೂ ನೀಡುವುದಕ್ಕೆ ಆಗಲ್ಲ. ತಮ್ಮನ್ನೇ ತಾವು ಮಾರಿಕೊಂಡವರು ಮುಂದೊಂದು ದಿನ ರಾಜ್ಯ ಹಾಗೂ ಆರ್.ಆರ್.ನಗರ ಕ್ಷೇತ್ರವನ್ನು ಮಾರುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಆರ್.ಆರ್.ನಗರ ಜೆಡಿಎಸ್ ಅಧ್ಯಕ್ಷ ಆರ್.ಚನ್ನಕೇಶವಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News