ಬೆಂಗಳೂರು ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಗೆ ಜಾಮೀನು ನಿರಾಕರಿಸಿದ ಕೋರ್ಟ್

Update: 2020-10-28 16:05 GMT

ಬೆಂಗಳೂರು, ಅ.28: ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ನಿವಾಸದ ಮೇಲೆ ದಾಳಿ ನಡೆಯಲು ಕುಮ್ಮಕ್ಕು ನೀಡಿದ ಎಂಬ ಆರೋಪದಡಿ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಕಾರ್ಪೋರೇಟರ್ ಅಬ್ದುಲ್ ರಕೀಬ್ ಜಾಕಿರ್ ಹಾಗೂ ಸೋದರ ಯಾಸಿರ್ ಮುಹಮ್ಮದ್ ಹಮೀದ್‍ಗೆ ನಗರದ 71ನೆ ಸಿಸಿಎಚ್ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಿಗೆ ನಿರಾಕರಿಸಿದೆ.

ಜಾಮೀನು ಕೋರಿ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ರಕೀಬ್ ಜಾಕಿರ್ ಮತ್ತವರ ತಮ್ಮ ಯಾಸಿರ್ ಮೊಹಮ್ಮದ್ ಹಮೀದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಸುಭಾಷ್ ಸಂಕದ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಹಸ್ಮತ್ ಪಾಷಾ ಅವರು, ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರವಾದಂತವು. ಹಾಗಿದ್ದೂ ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಅವರು ತಲೆ ಮರೆಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಹೀಗಾಗಿ ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಸರಕಾರಿ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ವಾದಿಸಿ, ಆರೋಪಿಗಳ ವಿರುದ್ಧ ದಾಖಲಿಸಿರುವಂಥ ದೂರು ಗುರುತರವಾದದ್ದು. ಆರೋಪಿತರು ಪೊಲೀಸರ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ. ಶಾಸಕರ ಮನೆಗೆ ಬೆಂಕಿ ಹಚ್ಚುವಲ್ಲಿ ಇವರ ಪಾತ್ರವಿದ್ದು ತನಿಖೆ ನಡೆಯುತ್ತಿದೆ. ಮುಖ್ಯವಾಗಿ ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಷನ್ 15(ಎ) ಪ್ರಕಾರ ದೂರುದಾರನಿಗೆ ನೋಟಿಸ್ ನೀಡದೇ ಯಾವುದೇ ಕ್ರಮ ಜರುಗಿಸುವಂತಿಲ್ಲ. ಅಂತೆಯೇ ಕಾಯ್ದೆ 18(ಎ) ಪ್ರಕಾರ ಆರೋಪಿತರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಕೋರಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿತು. ಹಾಗೆಯೇ ಪ್ರಕರಣದ ವಿಚಾರಣೆಯನ್ನು ನ.4ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News