ಡ್ರಗ್ಸ್ ದಂಧೆ ಪ್ರಕರಣ: ಕೇರಳದ ಮಾಜಿ ಗೃಹ ಸಚಿವರ ಪುತ್ರನ ಬಂಧನ

Update: 2020-10-29 16:50 GMT

ತಿರುವನಂತಪುರ, ಅ. 29: ಮಾದಕ ದ್ರವ್ಯ ಜಾಲ ಪ್ರಕರಣದಲ್ಲಿ ಸಿಪಿಎಂನ ಕಾರ್ಯದರ್ಶಿ ಕೋಡಿಯೆರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೋಡಿಯೆರಿ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ.

 ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಒಂದು ದಿನದ ಬಳಿಕ ಈ ಬಂಧನ ನಡೆದಿದೆ. ಇದು ಸಿಪಿಎಂಗೆ ಇನ್ನೊಂದು ಹಿನ್ನಡೆ ಉಂಟು ಮಾಡಿದೆ. ಬಿನೇಶ್ ಕೋಡಿಯೇರಿ ಅವರಿಗೆ ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿ ಎರಡನೇ ಬಾರಿ ಸಮನ್ಸ್ ನೀಡಿತ್ತು. 3 ಗಂಟೆಗಳ ಕಾಲ ನಡೆದ ವಿಚಾರಣೆ ವೇಳೆ ಮಾದಕ ದ್ರವ್ಯ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ ಕುರಿತು ಸಮರ್ಪಕ ಉತ್ತರ ನೀಡುವಲ್ಲಿ ಅವರು ವಿಫಲರಾಗಿದ್ದರು. ಅನಂತರ ಅವರನ್ನು ಬಂಧಿಸಲಾಯಿತು ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮಾದಕ ದ್ರವ್ಯ ಜಾಲದ ಆರೋಪಿಯಾಗಿರುವ ಅನೂಪ್ ಮುಹಮ್ಮದ್ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ ವಿಚಾರಣೆ ನಡೆಸುವಾಗ ನೀಡಿದ ಹೇಳಿಕೆಯಲ್ಲಿ ಬಿನೇಶ್ ಅವರ ಹೆಸರನ್ನು ಉಲ್ಲೇಖಿಸಿದ್ದ. ‘‘ಬಾಲಕೃಷ್ಣ ಕೋಡಿಯೆರಿ ಅವರ ಎರಡನೇ ಪುತ್ರ ಬಿನೇಶ್ ಕೋಡಿಯೆರಿ ತನ್ನ ಉದ್ಯಮಕ್ಕೆ ಸಾಕಷ್ಟು ಸಹಾಯ ಮಾಡಿದ್ದ’’ ಎಂದು ಅನೂಪ್ ಮುಹಮ್ಮದ್ ಹೇಳಿದ್ದ. ಅನಂತರ ಅನೂಪ್ ಮುಹಮ್ಮದ್‌ನ ಕಾಲ್ ಲಿಸ್ಟ್‌ನಲ್ಲಿ ಬಿನೇಶ್ ಕೋಡಿಯೇರಿ ಅವರ ಹೆಸರು ಕಂಡು ಬಂದಿತ್ತು. ಬಳಿಕ ಬಿನೇಶ್ ಕೋಡಿಯೆರಿ ತನಗೆ ಅನೂಪ್ ಮುಹಮ್ಮದ್‌ನ ಪರಿಚಯ ಇದೆ. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ಆರಂಭಿಸಲು ಆತ ತನಗೆ ಸಹಾಯ ಮಾಡಿದ್ದ. ಆದರೆ, ಆತನ ಮಾದಕ ದ್ರವ್ಯ ವ್ಯವಹಾರದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದರು. ಆದರೆ, ಬಿನೇಶ್ ಕೋಡಿಯೆರಿ ಬಿ ಕ್ಯಾಪಿಟಲ್ ಸೊಲ್ಯುಷನ್ ಹಾಗೂ ಬಿ ಕ್ಯಾಪಿಟಲ್ ಫೋರೆಕ್ಸ್ ಎಂಬ ಎರಡು ಶೆಲ್ ಕಂಪೆನಿಗಳನ್ನು ನಡೆಸುತ್ತಿರುವುದು ಹಾಗೂ ಮೋಸದ ವ್ಯವಹಾರಗಳಲ್ಲಿ ತೊಡಗಿಕೊಂಡಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News