ರೈಲ್ವೆ ಪ್ಲಾಟ್‍ಫಾರ್ಮ್ ದರ, ಪಾರ್ಕಿಂಗ್ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

Update: 2020-10-29 16:39 GMT

ಬೆಂಗಳೂರು, ಅ. 29: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತದ ರೈಲ್ವೆ ನಿಲ್ದಾಣಗಳಲ್ಲಿನ ಪ್ಲ್ಯಾಟ್‍ಫಾರ್ಮ್ ಟಿಕೆಟ್ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕದ ಹೆಚ್ಚಳದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ, ನಗರದ ರೈಲ್ವೆ ವ್ಯವಸ್ಥಾಪಕರ ಕಚೇರಿ ಎದುರು `ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಮಿತಿ'ಯು ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.

ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಹಿರಿಯ ಕಾರ್ಯಕರ್ತ ಷಣ್ಮುಗಂ ಪಿ.ಎಸ್ ಮಾತನಾಡಿ, `ಕೋವಿಡ್-19 ಸಾಂಕ್ರಾಮಿಕ ರೋಗವು ಸಾಮಾನ್ಯ ಜನರ ಜೀವನವನ್ನು ಶೋಚನೀಯಗೊಳಿಸಿದೆ. ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಬಹುಪಾಲು ಸಾಮಾನ್ಯ ಜನರು ರೈಲ್ವೆಯ ಮೇಲೆ ಅವಲಂಬಿತರಾಗಿದ್ದಾರೆ. ಇದರ ಮೇಲೆ ವಾಹನ ನಿಲುಗಡೆ ಶುಲ್ಕ, ಪ್ಲಾಟ್‍ಫಾರ್ಮ್ ಟಿಕೆಟ್ ಶುಲ್ಕವನ್ನು ಹೆಚ್ಚಿಸುವ ಈ ನಿರ್ಧಾರವು ಸ್ವೀಕಾರ್ಹವಲ್ಲ' ಎಂದು ಹೇಳಿದರು.

`ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಕ್ರಮವು ಜನ ವಿರೋಧಿ, ಏಕೆಂದರೆ ರೈಲ್ವೆಯ ಮೇಲೆ ಅವಲಂಬಿತವಾಗಿರುವ ಪ್ರಯಾಣಿಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಕಚೇರಿ ಹೋಗುವವರು, ಕೆಳ ಮಧ್ಯಮ ವರ್ಗದವರು ಮತ್ತು ಬಡವರು. ಪರಿಷ್ಕೃತ ದರಗಳು ಜನರನ್ನು ಮತ್ತಷ್ಟು ದುಃಖಕ್ಕೆ ತಳ್ಳುತ್ತವೆ ಮತ್ತು ಮುಂದಿನ ದಿನಗಳಲ್ಲಿ ರೈಲ್ವೆ ಬಳಸಿ ಪ್ರಯಾಣಿಸಲು ಸಾಮಾನ್ಯ ಜನರಿಗೆ ಅಸಾಧ್ಯವಾಗುತ್ತದೆ' ಎಂದು ಅವರು ತಿಳಿಸಿದರು.

'ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ-ಕರ್ನಾಟಕವು ರೈಲ್ವೆ ಸಚಿವಾಲಯ ಮತ್ತು ಅಧಿಕಾರಿಗಳಲ್ಲಿ ಪ್ಲಾಟ್‍ಫಾರ್ಮ್ ಟಿಕೆಟ್ ಶುಲ್ಕವನ್ನು 50 ರೂ.ನಿಂದ ಹಳೆಯ ದರ 10 ರೂ.ಗಳಿಗೆ ಕೂಡಲೇ ಇಳಿಸಿ, ವಾಹನ ನಿಲುಗಡೆ ಶುಲ್ಕದಲ್ಲಿನ ಪರಿಷ್ಕೃತ ಹೆಚ್ಚಳ ದರವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು.

ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಮಂತ್ರಿಗಳು ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಕೋವಿಡ್-10 ಪರಿಸ್ಥಿತಿ ಕಡಿಮೆಯಾದ ನಂತರ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಅವರಿಗೆ ತಿಳಿಸಲು ನಾವು ಬಯಸುತ್ತೇವೆ. ಪ್ರತಿಭಟನೆಯ ನಂತರ, ವಿಭಾಗೀಯ ರೈಲ್ವೇ ಮ್ಯಾನೇಜರ್ ಅವರಿಗೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದು ರೈಲ್ವೇ ಖಾಸಗೀಕರಣ ವಿರೋಧಿ ಅಭಿಯಾನದ ಪರವಾಗಿ ದುರ್ಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News