ಬಿಷಪ್ ಕಾಟನ್ ವಿದ್ಯಾ ಸಂಸ್ಥೆ ವಿರುದ್ಧ ಆಯುಕ್ತರಿಗೆ ದೂರು ಸಲ್ಲಿಕೆ

Update: 2020-10-29 18:10 GMT

ಬೆಂಗಳೂರು, ಅ.29: ಬಿಷಪ್ ಕಾಟನ್ ವಿದ್ಯಾ ಸಂಸ್ಥೆ ಕೋಟ್ಯಂತರ ರೂಪಾಯಿ ಸೇವಾ ಹಾಗೂ ಆಸ್ತಿ ತೆರಿಗೆ ವಂಚನೆ ಮಾಡಿದ್ದು, ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಾಳಿದ್ದಾರೆ. ಇವರುಗಳ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕೆಂದು ಆರೋಪಿಸಿ ಮಾಜಿ ಪಾಲಿಕೆ ಆಡಳಿತ ಪಕ್ಷದ ಮುಖಂಡರು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್ ರಮೇಶ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಛೇರಿಗೆ ಹೊಂದಿಕೊಂಡಂತೆಯೇ ಇರುವ ಚರ್ಚ್ ಆಫ್ ಸೌತ್ ಇಂಡಿಯಾ ಎಂಬ ಹೆಸರಿನಲ್ಲಿರುವ 27 ಎಕರೆ ವಿಸ್ತೀರ್ಣದ ಸ್ವತ್ತಿನ ಪೈಕಿ ಸುಮಾರು 04 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಬಿಷಪ್ ಕಾಟನ್ ಪದವಿ ಕಾಲೇಜು ಮತ್ತು ಕಾನೂನು ಕಾಲೇಜುಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ 12 ವರ್ಷಗಳಿಂದಲೂ ಆಸ್ತಿ ತೆರಿಗೆಯನ್ನೇ ಪಾವತಿ ಮಾಡದಿರುವ ಅಂಶ ಬೆಳಕಿಗೆ ಬಂದಿದೆ.

ಬಿಬಿಎಂಪಿ ವಿಶೇಷ ಆಯುಕ್ತರಿಗೆ ದೂರು ನೀಡಿರುವ ರಮೇಶ್, 2008-09 ರಿಂದ 2016-17ರವರೆಗೆ ಕೇವಲ ಶೇ. 25ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ಕಾಲೇಜು ಆಡಳಿತ ಮಂಡಳಿಯು 2017-18ರಿಂದ ಈವರೆಗೆ ಸೇವಾ ತೆರಿಗೆಯನ್ನೂ ಸಹ ಪಾವತಿಸಿರುವುದಿಲ್ಲ ಎಂದು ಅಪಾದಿಸಿದ್ದಾರೆ.

ನಗರದ ಕೇಂದ್ರಭಾಗದಲ್ಲಿ ನಾಲ್ಕು ಎಕರೆಗಳಷ್ಟು ವಿಸ್ತೀರ್ಣದ ಈ ಜಾಗದಲ್ಲಿ ಸುಮಾರು 96,070 ಚ.ಅಡಿಗಳಷ್ಟು ವಿಸ್ತೀರ್ಣದ ಕಾಲೇಜು ಕಟ್ಟಡವೂ ಇದೆ. ಎ ಝೋನ್ ವ್ಯಾಪ್ತಿಯಲ್ಲಿರುವ ಈ ಕಾಲೇಜಿನ 96,070 ಚ.ಅಡಿಗಳಷ್ಟು ವಿಸ್ತೀರ್ಣದ ಒಟ್ಟು ನಿರ್ಮಿತ ಪ್ರದೇಶಕ್ಕೆ ಪಾಲಿಕೆಯು ವಾಣಿಜ್ಯ ಕಟ್ಟಡಗಳಿಗೆ ನಿಗದಿಪಡಿಸಿರುವಂತೆ ವಾರ್ಷಿಕವಾಗಿ ಪ್ರತಿಯೊಂದು ಚ. ಅಡಿ ವಿಸ್ತೀರ್ಣದ ಕಟ್ಟಡಕ್ಕೆ 12.50 ರೂ.ಗಳಂತೆ ಒಟ್ಟು 31,29,060 ರೂಪಾಯಿ ಮೊತ್ತದ ವಾರ್ಷಿಕ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿರುತ್ತದೆ ಎಂದು ತಿಳಿಸಿದ್ದಾರೆ.

2008-09ರಿಂದ 2016-17ರವರೆಗೆ ಶೇ. 25ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಈವರೆವಿಗೆ ಆಸ್ತಿ ತೆರಿಗೆಯನ್ನೇ ಪಾವತಿಸದೇ ಪಾಲಿಕೆಗೆ ಹತ್ತಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಬಿಷಪ್ ಕಾಟನ್ ಮಹಿಳಾ ಕಾಲೇಜು ಮತ್ತು ಕಾನೂನು ಕಾಲೇಜಿನ ಆಡಳಿತ ಮಂಡಳಿಯು ಪ್ರತಿಯೊಬ್ಬ ವಿದ್ಯಾರ್ಥಿಯಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಯಷ್ಟು ವಾರ್ಷಿಕ ಶುಲ್ಕವನ್ನು ವಸೂಲಿ ಮಾಡುತ್ತಿದ್ದರೂ ಆಡಳಿತ ಮಂಡಳಿಯವರು ಆಸ್ತಿ ತೆರಿಗೆ ರಿಯಾಯಿತಿಯನ್ನು ಕೇಳಿರುತ್ತಾರೆ. ಸರಕಾರಿ ಅನುದಾನಿತ ಶಾಲಾ ಕಾಲೇಜುಗಳಿಗೆ ‘ಆಸ್ತಿ ತೆರಿಗೆ ರಿಯಾಯಿತಿ’ ನೀಡದ ಪಾಲಿಕೆಯು ಇಂತಹ ದೊಡ್ಡ ಮಟ್ಟದ ವಾಣಿಜ್ಯ ಉದ್ದೇಶಿತ ಕಾಲೇಜುಗಳಿಗೆ ಆಸ್ತಿ ತೆರಿಗೆ ರಿಯಾಯಿತಿ ನೀಡುವುದು ಸರಿಯಲ್ಲ ಎಂದು ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News