ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿ ?

Update: 2020-10-30 13:29 GMT

ಬೆಂಗಳೂರು, ಅ.30: ಡಿಜೆ-ಕೆಜಿಹಳ್ಳಿ ಪ್ರಕರಣದಲ್ಲಿ ಗಲಭೆ ಆರೋಪ ಹೊತ್ತಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರೋನ ಸೋಂಕಿನ ಪರಿಣಾಮ ನಗರದ ಹೆಬ್ಬಾಳ ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕಳೆದ ಐದು ದಿನಗಳ ಹಿಂದೆಯೇ ಸಿಸಿಬಿ ತನಿಖಾಧಿಕಾರಿಗಳ ಕಣ್ತಪ್ಪಿಸಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎನ್ನಲಾಗಿದೆ.

ಬಂಧನ ಭೀತಿಯಿಂದಲೇ ಕೊರೋನ ಸೋಂಕಿನ ನೆಪದಲ್ಲಿ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ, ಯಾರಿಗೂ ಮಾಹಿತಿ ನೀಡದೆ, ಪರಾರಿಯಾಗಿದ್ದಾರೆ. ಗುರುವಾರ ತಡರಾತ್ರಿ ಸಿಸಿಬಿ ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದಾಗ ಈ ವಿಚಾರ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯಿಂದ ಬಿಡುಗಡೆಯಾದರೆ, ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಆಸ್ಪತ್ರೆಗೆ ನೋಟಿಸ್ ನೀಡಲಾಗಿತ್ತು. ಆದರೂ ಆದೇಶ ಮೀರಿ ನಡೆದುಕೊಳ್ಳಲಾಗಿದೆ. ಇನ್ನು, ಪ್ರಕರಣದ 51ನೆ ಆರೋಪಿ ಆಗಿರುವ ಸಂಪತ್‍ರಾಜ್ ಅವರ ಪತ್ತೆಯಾಗಿ ವಿಶೇಷ ತಂಡವೊಂದನ್ನು ನೇಮಕ ಮಾಡಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News