ಉಪಚುನಾವಣೆ ಬಳಿಕ ಮೀಸಲಾತಿ ಸಂಬಂಧ ಚರ್ಚೆ: ಸಿಎಂ ಯಡಿಯೂರಪ್ಪ

Update: 2020-10-31 11:28 GMT

ಬೆಂಗಳೂರು, ಅ.31: ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಬದ್ಧವಾಗಿದ್ದು, ಉಪ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಮುದಾಯದ ಮೀಸಲಾತಿ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೋವಿಡ್ ಕಾರಣದಿಂದಾಗಿ ಈ ಬಾರಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖ್ಯಮಂತಿ ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಹಲವು ಕಡೆಗಳಲ್ಲಿ ಹೋರಾಟ ನಡೆದಿರುವುದು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಸಂಬಂಧ ಸರಕಾರ ಹಾಗೂ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಬಾರಿ ವಾಲ್ಮೀಕಿ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ ಸಿಎಂ, ಅವರ ಹೆಸರುಗಳನ್ನು ಘೋಷಿಸಿದರು. ಡಾ. ಕೆ.ಆರ್.ಪಾಟೀಲ್, ಬಿ.ಎಲ್.ವೇಣು, ಗೌರಿ ಕೊರಗ, ಮಾರಪ್ಪ ನಾಯಕ, ತಿಪ್ಪೇಸ್ವಾಮಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದವರು.

ಸಿಎಂ ತೆರಳಿದ ಬಳಿಕ ಸಮುದಾಯದ ಮುಖಂಡರು ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಪ್ರತಿಮೆ ಮುಂದೆ ಘೋಷಣೆ ಕೂಗಿ ಸರಕಾರ ಶೀಘ್ರದಲ್ಲಿಯೇ ಮೀಸಲಾತಿ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ನಾಲ್ಕು ದಶಕಗಳಿಂದ ಸಮುದಾಯ ಮೀಸಲಾತಿಯ ಬೇಡಿಕೆ ಇಡುತ್ತಾ ಬಂದಿದೆ. ಸದ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ನವೆಂಬರ್ 10ರ ಬಳಿಕ ಸಿಎಂ ಜೊತೆ ಚರ್ಚಿಸಿ ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಸಮುದಾಯದ ನಾಯಕ ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇದೆ. ಅದಕ್ಕೆ ಸರಕಾರ ಬದ್ಧವಾಗಿದೆ. ಕಳೆದ ಬಾರಿ ಮೂರು ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಐದು ಪ್ರಶಸ್ತಿ ನೀಡಲಾಗ್ತಿದೆ. ನೀತಿ ಸಂಹಿತೆ ಮುಗಿದ ಬಳಿಕ ಸಮುದಾಯದ ಅಪೇಕ್ಷೆಯನ್ನು ಘೋಷಣೆ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News