ಆರೆಸ್ಸೆಸ್ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿ ಸಚಿವರಿಂದ ದಾರಿತಪ್ಪಿಸುವ ಯತ್ನ: ಎನ್.ಹನುಮೇಗೌಡ ಆರೋಪ

Update: 2020-10-31 12:35 GMT

ಬೆಂಗಳೂರು, ಅ. 31: `ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಹಣಕಾಸಿನ ವ್ಯವಹಾರಗಳು ಸೇರಿದಂತೆ ಅವರ ಇನ್ನಿತರ ಚಟುವಟಿಕೆಗಳ ಎಲ್ಲ ಮಾಹಿತಿ ಇದ್ದರೂ, ಈ ಬಗ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ವಿಧಾನ ಪರಿಷತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ `ನೋಂದಾಯಿತ ಆರೆಸ್ಸೆಸ್'ನ ಕಾರ್ಯಕರ್ತ ಎನ್.ಹನುಮೇಗೌಡ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ `ವಾರ್ತಾಭಾರತಿ' ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, `ನಾನೇ ಎರಡು ವರ್ಷಗಳಿಂದಲೂ ಆರೆಸ್ಸೆಸ್ ಚಟುವಟಿಕೆಗಳ ಬಗ್ಗೆ ಸರಕಾರಕ್ಕೆ ಹತ್ತು ಹಲವು ದೂರುಗಳನ್ನು ಸಲ್ಲಿಸುತ್ತಿದ್ದರೂ, ಇದಕ್ಕೆ ಸರಕಾರದ ಯಾವುದೇ ಇಲಾಖೆಯಿಂದಲೂ ಸಮರ್ಪಕ ಉತ್ತರ ಬಂದಿಲ್ಲ. 2018ರ ಆಗಸ್ಟ್ 25ಕ್ಕೆ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದೇನೆ' ಎಂದು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಕೆಲ ಸಂಘಟನೆಗಳು ಅನಧಿಕೃತವಾಗಿ ಹಣ ಸಂಗ್ರಹ ಮಾಡುತ್ತಿದ್ದು, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿವೆ. ಹೀಗಾಗಿ ಅವರ ಮೇಲೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ 2018ರ ಜುಲೈ 19ಕ್ಕೆ ದೂರು ನೀಡಿದ್ದೇನೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹನುಮೇಗೌಡ ಆರೋಪಿಸಿದರು.

ಆರೆಸ್ಸೆಸ್ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಖುದ್ದು ನಾನೇ ಸಹಕಾರ ಇಲಾಖೆಗೆ ಮಾಹಿತಿ ಕೋರಿದ್ದರೂ, ಉತ್ತರಿಸಿಲ್ಲ. ಆದರೆ, ರಾಜ್ಯದಲ್ಲಿರುವ ಯಾವುದೇ ವ್ಯಕ್ತಿ ಏನೇ ಚಟುವಟಿಕೆ ನಡೆಸಿದರೂ, ಪೆಟ್ಟಿ ಅಂಗಡಿ ವ್ಯಾಪಾರ ನಡೆಸಬೇಕಿದ್ದರೂ ಅದಕ್ಕೆ ಸ್ಥಳೀಯ ಸಂಸ್ಥೆಯ ನೋಂದಣಿ, ಅನುಮೋದನೆ ಕಡ್ಡಾಯ. ಹೀಗಿರುವಾಗ ಕೋಟ್ಯಂತರ ಜನರನ್ನು ಸದಸ್ಯರನ್ನಾಗಿ ಹೊಂದಿರುವ `ಅತಿದೊಡ್ಡ' ಸಂಘಟನೆ, ಕೋಟ್ಯಂತರ ರೂ. ಸಂಗ್ರಹಿಸುವ ಸಂಘಟನೆ ನೋಂದಣಿ ಇಲ್ಲದೆ ವಂಚಿಸುತ್ತಿದೆ ಎಂದು ಹನುಮೇಗೌಡ ದೂರಿದರು.

'ಆರೆಸ್ಸೆಸ್ ನೂರಾರು ಮಂದಿಗೆ ಹಸರಿನಲ್ಲಿ ಅಕ್ರಮ, ಬೇನಾಮಿ ಆಸ್ತಿ ಮಾಡಿಕೊಂಡಿದೆ. ಸರಕಾರಕ್ಕೆ ಲೆಕ್ಕಪತ್ರವನ್ನೇ ಸಲ್ಲಿಸುತ್ತಿಲ್ಲ. ಪ್ರತಿ ವರ್ಷ ವಿಜಯದಶಮಿ ಸೇರಿದಂತೆ ಇನ್ನಿತರ ಹಬ್ಬಹರಿದಿನಗಳ ಸಂದರ್ಭದಲ್ಲಿ ಆರೆಸ್ಸೆಸ್ ಪಥ ಸಂಚಲನ ನಡೆಸುತ್ತಿದೆ. ಅಕ್ರಮ ಶಸ್ತ್ರಸ್ತ್ರಾಗಳ ಮೆರವಣಿಗೆ ನಡೆಸುತ್ತಿದ್ದರೂ, ಸರಕಾರದ ಕಣ್ಣಿಗೆ ಇದು ಕಾಣಿಸುತ್ತಿಲ್ಲ. ಈ ಸಂಘಟನೆ ಸರಕಾರಿ ಅಧಿಕಾರಿಗಳು ಸೇರಿದಂತೆ ಮುಗ್ದ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಎನ್.ಹನುಮೇಗೌಡ ಆಪಾದಿಸಿದರು.

ನಾನು ನೋಂದಣಿ ಮಾಡಿದ್ದೇನೆ: `ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ವನ್ನು ನಾನು ನೋಂದಣಿ ಮಾಡಿಕೊಂಡಿದ್ದೇನೆ. ಇದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ. ಪಾನ್‍ಸಂಖ್ಯೆಯನ್ನು ಹೊಂದಿದ್ದೇನೆ. ಆದರೆ, ಯಾವುದೇ ಅಕ್ರಮ, ಹಣಕಾಸಿನ ವ್ಯವಹಾರ ನಡೆಸುತ್ತಿಲ್ಲ. ಬದಲಿಗೆ ಅದೇ ಹೆಸರಿನಲ್ಲಿ ಕೆಲವರು ಕೋಟ್ಯಂತರ ರೂ.ಸಂಗ್ರಹಿಸಿ ಅಕ್ರಮ ನಡೆಸುತ್ತಿದ್ದಾರೆ. ಆದರೆ, ಸಹಕಾರ ಸಚಿವ ಸೋಮಶೇಖರ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಹೀಗಾಗಿ ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಆಲೋಚಿಸಬೇಕು' ಎಂದು ಹನುಮೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News