×
Ad

ಆನೆ ದಂತ ಮಾರಾಟ: ಇಬ್ಬರ ಸೆರೆ

Update: 2020-10-31 18:17 IST

ಬೆಂಗಳೂರು, ಅ.31: ಕಾನೂನು ಬಾಹಿರ ಆನೆ ದಂತ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮಾಗಡಿ ಕುದೂರು ಗ್ರಾಮದ ಮಂಜುನಾಥ್ ಹಾಗೂ ಲೋಕೇಶ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ವಾಹನವೊಂದಕ್ಕೆ ಸಿಲುಕಿ ಮೃತಪಟ್ಟಿದ್ದ ಆನೆಯ ದಂತ ಕದ್ದಿದ್ದ ಆರೋಪಿ ಕೃಷ್ಣ ಎಂಬಾತ ತದನಂತರ, ಆಟೊ ಚಾಲಕ ಲೋಕೇಶ್‍ಗೆ ದಂತ ನೀಡಿ 5 ಲಕ್ಷಕ್ಕೆ ಮಾರಾಟ ಮಾಡಿಕೊಡುವಂತೆ ಹೇಳಿದ್ದಾನೆ. ಈ ಕೃತ್ಯಕ್ಕೆ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಕೈ ಜೋಡಿಸಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ದಂತವನ್ನು ಬೆಂಗಳೂರಿಗೆ ತೆಗೆದುಕೊಂಡು ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಮಾತನಾಡಿಕೊಂಡು ನಗರದ ಜಾಲಹಳ್ಳಿಗೆ ಬಂದು ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಈ ಕುರಿತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ಎಂಬಾತ ತಲೆಮರೆಸಿಕೊಂಡಿದ್ದು, ಬಂಧಿತರಿಂದ ಮೂರು ತುಂಡು ಆನೆ ದಂತ ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News