ಅಧಿಕಾರಿಗಳ ನಿರ್ಲಕ್ಷ್ಯ: ತಾವೇ ರಸ್ತೆ ನಿರ್ಮಾಣ ಮಾಡಿದ ಓನರ್ಸ್ ಕೋರ್ಟ್ ಲೇಔಟ್ ನಿವಾಸಿಗಳು

Update: 2020-10-31 13:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.31: ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ನಗರದ ಬೆಳ್ಳಂದೂರಿನ ಕಸವನಹಳ್ಳಿಯ ಓನರ್ಸ್ ಕೋರ್ಟ್ ಲೇಔಟ್ ನಿವಾಸಿಗಳು ತಮ್ಮ ಏರಿಯಾದ ರಸ್ತೆಯನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ.

ನಗರದ ಓನರ್ಸ್ ಕೋರ್ಟ್ ಲೇಔಟ್ ಕಸವನಹಳ್ಳಿಯಲ್ಲಿ, ಜಲಮಂಡಳಿಯಿಂದ ವಾಟರ್ ಪೈಪ್ ಲೈನ್ ಅಳವಡಿಕೆಗೆ ರಸ್ತೆಯನ್ನು ಅಗೆಯಲಾಗಿತ್ತು. ಇದಾದ ಬಳಿಕ ರಸ್ತೆಗೆ ಡಾಂಬರೀಕರಣ ಮಾಡದೆ ಮಣ್ಣಿನ ರಸ್ತೆ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಣ್ಣಿನ ರಸ್ತೆ ಮಳೆ ಬಂದಾಗ ಕೆಸರುಮಯವಾಗುತ್ತದೆ, ಬೇಸಿಗೆಯಲ್ಲಿ ಧೂಳಿಂದ ಕೂಡಿರುತ್ತದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಕೂಡ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಹಲವಾರು ಬಾರಿ ಇದೇ ರಸ್ತೆಯಲ್ಲಿ ಮುಗ್ಗರಿಸಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಬಿಬಿಎಂಪಿಗೆ ಸಾಲು ಸಾಲು ದೂರುಗಳನ್ನು ನೀಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು ಹಾಗೂ ಬೆಳ್ಳಂದೂರು ವಾರ್ಡ್ ಇಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಹೀಗಾಗಿ ಅಧಿಕಾರಿಗಳ ಮೇಲೆ ವಿಶ್ವಾಸ ಕಳೆದುಕೊಂಡ ಸ್ಥಳೀಯರು, ತಮ್ಮ ಸ್ವಂತ ದುಡ್ಡಿನಿಂದ ರಸ್ತೆ ನಿರ್ಮಾಣ ಮಾಡಿದ್ದಾರೆ.

ನಗರದ ನಿವಾಸಿಗಳೆಲ್ಲಾ ಹಣವನ್ನ ಒಟ್ಟು ಮಾಡಿ, ಮೂರು ಲಕ್ಷ ಹಣ ಸಂಗ್ರಹ ಮಾಡಿದ್ದು, ರಸ್ತೆಯನ್ನ ಸಮತಟ್ಟು ಮಾಡಿ ಜೆಲ್ಲಿ ಹಾಕಿಸಿ ಓಡಾಡೋಕೆ ಯೋಗ್ಯವಾಗುವಂತೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News