ಬಾಡಿಗೆ ಪಾವತಿಸದ್ದಕ್ಕೆ ಮಹಿಳೆಗೆ ಚೂರಿ ಇರಿದ ಮನೆಯೊಡತಿ

Update: 2020-10-31 13:53 GMT

ಬೆಂಗಳೂರು, ಅ.31: ಲಾಕ್‍ಡೌನ್ ಹಿನ್ನೆಲೆ ಆರ್ಥಿಕ ಸಂಕಷ್ಟದಿಂದ ಬಾಡಿಗೆ ಪಾವತಿ ಮಾಡದ ಕಾರಣಕ್ಕೆ ಬಾಡಿಗೆದಾರರ ಮೇಲೆ ಮನೆಯೊಡತಿ ಚಾಕುವಿನಿಂದ ಇರಿದು, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಹಿಳೆಯನ್ನು ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮೀ ಎಂಬಾಕೆ ಬಂಧಿತ ಆರೋಪಿ. ಪೂರ್ಣಿಮಾ ಹಲ್ಲೆಗೊಳಗಾಗಿರುವ ಮಹಿಳೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ರಾಜಗೋಪಾಲ ನಗರದ ಲಗ್ಗೆರೆಯಲ್ಲಿ ವಾಸವಾಗಿದ್ದ ಮಹಾಲಕ್ಷ್ಮೀ, ಪೂರ್ಣಿಮಾ ಎಂಬವರಿಗೆ ಮನೆ ಬಾಡಿಗೆಗೆ ಕೊಟ್ಟಿದ್ದು, ಲಾಕ್‍ಡೌನ್‍ನಿಂದ ನಾಲ್ಕು ತಿಂಗಳಿಂದ ಬಾಡಿಗೆ ಹಣ ನೀಡಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು, ಜಗಳವಾಗಿದೆ. ತದನಂತರ, ಮನೆಗೆ ನುಗ್ಗಿದ ಮನೆ ಒಡತಿ, ಪೂರ್ಣಿಮಾರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ರಾಜಗೋಪಾಲ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮನೆ ಒಡತಿ ಮಹಾಲಕ್ಷ್ಮೀಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News