ಕಾರ್ಮಿಕ ವಿರೋಧಿ ಸರಕಾರಗಳ ವಿರುದ್ಧ ಆಂದೋಲನ ಅಗತ್ಯ: ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತಸುಬ್ಬರಾವ್

Update: 2020-10-31 14:53 GMT

ಬೆಂಗಳೂರು, ಅ.31: ಕಾರ್ಮಿಕರ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಕಾರ್ಮಿಕ ವಿರೋಧಿ ಸರಕಾರಗಳ ವಿರುದ್ಧ ಎಲ್ಲ ಕಾರ್ಮಿಕರು ಒಂದುಗೂಡಿ ದೊಡ್ಡಮಟ್ಟದಲ್ಲಿ ಆಂದೋಲನ ರೂಪಗೊಳ್ಳಬೇಕಾಗಿದೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್. ವಿ. ಅನಂತಸುಬ್ಬರಾವ್ ಹೇಳಿದ್ದಾರೆ.

ಶನಿವಾರ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಶತಮಾನೋತ್ಸವದ ಅಂಗವಾಗಿ ನಗರದ ಘಾಟೆ ಭವನದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಮಿಕ ಸಂಘಟನೆ ರೂಪಗೊಂಡು 100 ವರ್ಷಗಳು ರೂಪಗೊಳ್ಳುತ್ತಿರುವ ಸಂದರ್ಭದಲ್ಲಿ ಕಾರ್ಮಿಕರ ಬದುಕು ಒಂದಷ್ಟರ ಮಟ್ಟಿಗೆ ಬದಲಾಗಬೇಕಿತ್ತು. ಆದರೆ, ಇಂದಿಗೂ ಕಾರ್ಮಿಕರ ಬದುಕು ಬದಲಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರವು ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಕಾರ್ಪೋರೇಟ್ ಬಂಡವಾಳಿಗರನ್ನು, ಬಹುರಾಷ್ಟ್ರೀಯ ಕಂಪನಿಗಳನ್ನು ಓಲೈಸಲು ಮುಂದಾಗಿದ್ದಾರೆ. ಆ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ. ಇದರ ವಿರುದ್ಧ ಎಲ್ಲ ಕಾರ್ಮಿಕರು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.

ಕಾರ್ಖಾನೆಗಳಲ್ಲಿ ಅಗ್ಗದ ಊಲಿಯ ಜೀತದಾಳು ತರಬೇತುದಾರರನ್ನು ನೇಮಿಸುವುದು ಲೇಬರ್ ಕೋಡ್ ಸಂಕೇತವಾಗಿದೆ. ಇದರಿಂದ ಕಾಯಂ ಕಾರ್ಮಿಕರನ್ನು ಹಾಗೂ ಕಾರ್ಮಿಕ ಸಂಘಟನೆಗಳನ್ನು ಮೂಲೆಗುಂಪು ಮಾಡಲು ಕೇಂದ್ರದಲ್ಲಿರು ಬಿಜೆಪಿ ನೇತೃತ್ವದ ಸರಕಾರ ಹೊರಟಿದೆ. ಲೇಬರ್ ಕೋಡ್ ಹೆಸರಿನಲ್ಲಿ ಕಾರ್ಮಿಕರ ಎಲ್ಲ ಕಾನೂನಾತ್ಮಕ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕರ ಒಟ್ಟು ಆಶಯವನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ಅಪಾದಿಸಿದರು.

ಎಐಟಿಯುಸಿ ರಾಷ್ಟ್ರೀಯ ನಾಯಕರಾದ ಎಚ್.ಮಹದೇವನ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾರ್ಮಿಕ ವರ್ಗವನ್ನು ವಿಮೋಚನಾ ಚಳವಳಿಯಲ್ಲಿ ಅಣಿ ನೆರೆಸುವಲ್ಲಿ ಎಐಟಿಯುಸಿ ಪ್ರಮುಖ ಪಾತ್ರ ವಹಿಸಿದೆ. ಶೋಷಣೆಯ ವಿರುದ್ಧ ಅವಿರತವಾಗಿ ಸಂಘಟನೆ ದುಡಿಯುತ್ತಿದೆ. ಎಐಟಿಯುಸಿ ಹೋರಾಟದ ಫಲವಾಗಿ ಇಂದು ಸಂಘಟಿತ ವಲಯದಲ್ಲಿ ಸಾಕಷ್ಟು ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ನೂರು ವರ್ಷಗಳ ನಿರಂತರ ಹೋರಾಟದಿಂದ ಕಾರ್ಮಿಕರಿಗೆ ಸಂಬಂಧಿಸಿದ ಅನೇಕ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ, ಈಗ ಆ ಎಲ್ಲ ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ(ಕೋಡ್‍ಗಳಲ್ಲಿ) ಕೂಡಿಸಿ ಹಿಂದೆ ಗಳಿಸಿದ್ದ ಅನೇಕ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕ ವರ್ಗವನ್ನು ಕಾರ್ಪೋರೇಟ್ ಧಣಿಗಳ ಶೋಷಣೆಗೆ ಕೇಂದ್ರ ಸರಕಾರ ತಳ್ಳಲು ಹೊರಟಿದೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಭಾರತ ವಕೀಲರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ, ಎಐಟಿಯುಸಿ ಪ್ರ.ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News