ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಪ್ರತಿಭಟನೆ: ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ

Update: 2020-10-31 17:00 GMT

ಬೆಂಗಳೂರು, ಅ.31: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನ್ವಯ ಎಸ್ಸಿ-ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ತ್ವರಿತವಾಗಿ ಹೆಚ್ಚಿಸಲು ರಾಜ್ಯ ಸರಕಾರ ಮುಂದಾಗಬೇಕು.ಇಲ್ಲದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ವಿಧಾನಸೌಧ ಬಳಿಯ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶೋಷಿತ ಸಮುದಾಯದ ಹಲವು ಹೋರಾಟಗಳ ಫಲವಾಗಿ ರಾಜ್ಯ ಸರಕಾರ ನ್ಯಾಯಮೂರ್ತಿ ನಾಗಮೋಹನ ದಾಸ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚನೆ ಮಾಡಿತ್ತು. ಅದರಂತೆ ಆಯೋಗವು ಸಮಗ್ರ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇದರಲ್ಲಿ ಎಸ್ಟಿಗೆ 3ರಿಂದ 7.5ರಷ್ಟು ಪ್ರಮಾಣ ಹೆಚ್ಚಿಸಲು ಹೇಳಲಾಗಿದೆ. ಆದರೆ, ಇದನ್ನು ಶೇಕಡ 10ಕ್ಕೆ ಏರಿಸಬೇಕು. ಅದೇ ರೀತಿ, ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣವನ್ನು 20ಕ್ಕೆ ಏರಿಕೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಯಾವುದೇ ಜಾತಿ, ಧರ್ಮ, ಕಟ್ಟುಪಾಡಿಗೆ ಸೀಮಿತವಾಗದಂತಹ ಮಾನವನ ಜಾತ್ಯತೀತ ಬದುಕಿಗೆ ಹತ್ತಿರವಾದ ಮಾನವೀಯತೆಯುಳ್ಳ ರಾಮಾಯಣದಂತಹ ವಿಶ್ವ ಶ್ರೇಷ್ಠ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಶಾಂತಿಯುತ ವ್ಯವಸ್ಥಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

ರಾಜ್ಯದೆಲ್ಲೆಡೆ ಪ್ರತಿಭಟನೆ

ಮೀಸಲಾತಿ ಪ್ರಮಾಣ ಹೆಚ್ಚಳ ಬೇಡಿಕೆಯನ್ನು ಉಪಚುನಾವಣೆ ಬಳಿಕ ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮಾತು ತಪ್ಪಿದರೆ ರಾಜ್ಯದೆಲ್ಲೆಡೆ ಪ್ರತಿಭಟಿಸಲಾಗುವುದು.

-ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News