ರೂಪಾಂತರಗೊಳ್ಳುತ್ತಿರುವ ಕೊರೋನ: ಹೆಚ್ಚು ಸಾಂಕ್ರಾಮಿಕ, ಹೆಚ್ಚು ಅಪಾಯಕಾರಿ !

Update: 2020-11-01 13:05 GMT

ಕೊರೋನ ವೈರಸ್ ದೈತ್ಯಸ್ವರೂಪಿಯಾಗಿ ಇಡೀ ವಿಶ್ವವನ್ನು ತನ್ನ ಹಿಡಿತದಲ್ಲಿರಿಸಿಕೊಂಡ ಸಮಯದಲ್ಲಿಯೇ ವೈದ್ಯಕೀಯ ತಜ್ಞರು ಅದರ ವಂಶವಾಹಿ ರೂಪಾಂತರದ ಬಗ್ಗೆ ವಿವರಿಸಿದ್ದರು. ವಂಶವಾಹಿ ರೂಪಾಂತರವು ವೈರಸ್‌ನ ಶಕ್ತಿ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅದನ್ನು ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿಯನ್ನಾಗಿಸುತ್ತದೆ. 5,000ಕ್ಕೂ ಅಧಿಕ ಕೋವಿಡ್-19 ರೋಗಿಗಳ ಮೇಲಿನ ಇತ್ತೀಚಿನ ಅಧ್ಯಯನವೊಂದು ವೈರಸ್ ರೂಪಾಂತರಗೊಳ್ಳುತ್ತಿದೆ ಎನ್ನುವುದನ್ನು ಬೆಳಕಿಗೆ ತಂದಿದೆ. ವಂಶವಾಹಿ ಬದಲಾವಣೆಗಳು ವೈರಸ್‌ನ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವುದಿಲ್ಲ ಮತ್ತು ಮಾನವ ಶರೀರದೊಳಗೆ ಅದರ ಪ್ರವೇಶವನ್ನು ಸುಲಭಗೊಳಿಸುತ್ತವೆ.

ವೈರಸ್‌ನ ಸ್ಥಿತಿಗತಿಯನ್ನು ಕಂಡುಕೊಳ್ಳಲು ಅಮೆರಿಕದ ಆಸ್ಟಿನ್‌ನ ಟೆಕ್ಸಾಸ್ ವಿವಿಯ ಸಂಶೋಧಕರ ತಂಡವೊಂದು ಕೋವಿಡ್-19 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ವರದಿಯು ಇತ್ತೀಚಿಗೆ ‘ಎಂಬಯೊ’ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ನೊವೆಲ್ ಕೊರೋನವೈರಸ್ ರೂಪಾಂತರಗೊಳ್ಳುತ್ತಿದೆ ಮತ್ತು ಅದು ಈ ಹಿಂದೆಂದೂ ಇಲ್ಲದಷ್ಟು ತೀವ್ರ ಸಾಂಕ್ರಾಮಿಕವಾಗಬಹುದು ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ. ಈ ರೂಪಾಂತರವನ್ನು ‘ಡಿ614ಜಿ ’ಎಂದು ಹೆಸರಿಸಲಾಗಿದ್ದು,ಇದು ವೈರಸ್ ಮಾನವ ಶರೀರದಲ್ಲಿ ಪ್ರವೇಶಿಸಲು ನೆರವಾಗುವ ಸ್ಪ್ರೈಕ್ ಪ್ರೋಟಿನ್ ಅಥವಾ ಎಸ್ ಪ್ರೋಟಿನ್‌ನಲ್ಲಿ ಕಂಡು ಬಂದಿದೆ. ವಂಶವಾಹಿಯಲ್ಲಿ ಬದಲಾವಣೆಗಳು ವೈರಸ್‌ನ ವಿರುದ್ಧ ರಕ್ಷಣೆಯನ್ನು ನೀಡುವುದಿಲ್ಲ ಎನ್ನುತ್ತಾರೆ ಸಂಶೋಧಕರು.

ಹ್ಯೂಸ್ಟನ್ ಹಾಸ್ಪಿಟಲ್‌ನಲ್ಲಿರುವ ಶೇ.71ರಷ್ಟು ಕೋವಿಡ್-19 ರೋಗಿಗಳಲ್ಲಿ ಈ ರೂಪಾಂತರವು ಪತ್ತೆಯಾಗಿದೆ. ಕೊರೋನ ವೈರಸ್‌ನ ಎರಡನೇ ಅಲೆಯು ನಗರಕ್ಕೆ ಅಪ್ಪಳಿಸಿದ ಬಳಿಕ ಈ ಪ್ರವೃತ್ತಿಯನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಅಮೆರಿಕದಲ್ಲಿ ಮಾತ್ರವಲ್ಲ,ಇಡೀ ವಿಶ್ವದಲ್ಲಿ ಈ ರೂಪಾಂತರ ಪ್ರವೃತ್ತಿ ಕಂಡುಬಂದಿದೆ. ಜುಲೈನಲ್ಲಿ ನಡೆಸಲಾಗಿದ್ದ ಇಂತಹುದೇ ಅಧ್ಯಯನವು ಸಾವಿರಾರು ಜಿನೋಮ್ ಶ್ರೇಣಿಗಳಲ್ಲಿ ಈ ರೂಪಾಂತರವಿರುವುದನ್ನು ತೋರಿಸಿತ್ತು. ಈ ವೈರಸ್ ರೂಪಾಂತರವು ನಿಜಕ್ಕೂ ಇತರ ಸೋಂಕುಗಳಿಗಿಂತ ವೇಗವಾಗಿ ಹಬ್ಬುತ್ತಿದೆ ಎನ್ನುವುದನ್ನು ಬಳಿಕ ವಿಜ್ಞಾನಿಗಳು ಕಂಡುಕೊಂಡಿದ್ದರು.

ಈ ರೂಪಾಂತರವು ಶರೀರದಲ್ಲಿಯ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಮೂಲಕ ನಿರೋಧಕ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಈ ಬೆಳವಣಿಗೆಯಿಂದ ಕೋವಿಡ್-19 ಸೋಂಕನ್ನು ತಡೆಯುವ ಶರೀರದ ಸಾಮರ್ಥ್ಯವು ಕ್ಷೀಣಿಸುತ್ತದೆ. ಆದರೆ ಈ ರೂಪಾಂತರಗಳು ವ್ಯಕ್ತಿಯಿಂದ ವ್ಯಕ್ತಿಗೆ ಪ್ರಸಾರವಾಗುತ್ತವೆಯೇ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.

ಈ ರೂಪಾಂತರವು ಹಾಲಿ ರೋಗಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದು,ಇದು ಇದ್ದುದರಲ್ಲಿ ಸಮಾಧಾನಕರ ವಿಷಯವಾಗಿದೆ. ವೈರಸ್‌ನ ರೂಪಾಂತರ ಮುಂದುವರಿಯುತ್ತದೆಯಾದರೂ ಅದು ಸೋಂಕಿತ ರೋಗಿಗಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಆದರೂ ಈ ವೈರಸ್‌ನ ಬೆಳವಣಿಗೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಅದರ ಜಾಡನ್ನು ಹಿಡಿಯಲು ಸಂಶೋಧಕರು ನಿರಂತರವಾಗಿ ಕಾರ್ಯನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News