×
Ad

ಮಹಿಳೆಯ ಅಕ್ರಮ ಬಂಧನ ಆರೋಪ: ಇನ್ಸ್ ಪೆಕ್ಟರ್ ಸೇರಿ ಹಲವರ ವಿರುದ್ಧ ಎಫ್‍ಐಆರ್ ದಾಖಲು

Update: 2020-11-02 17:58 IST

ಬೆಂಗಳೂರು, ನ.2: ಮಹಿಳೆಯೊಬ್ಬಾಕೆಯನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದಡಿ ಇನ್‍ಸ್ಪೆಕ್ಟರ್ ಸೇರಿದಂತೆ ನಾಲ್ವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ವಿಜಯನಗರದ 42 ವರ್ಷದ ಮಹಿಳೆ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಭರತ್, ಪಿಎಸ್ಸೈ ಸಂತೋಷ್ ಕುಮಾರ್, ಅಕ್ಷಯ ಹಾಗೂ ಮುಖ್ಯಪೇದೆ ಲಿಂಗರಾಜ್ ವಿರುದ್ಧ ವಿಜಯನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪ್ರಕರಣ ಸಂಬಂಧ ಕರೆ ಮಾಡಿ ಠಾಣೆಗೆ ಕರೆಯಿಸಿಕೊಂಡು ಇಡೀ ರಾತ್ರಿ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಬಳಿಕ ಮಾರನೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಅವಾಚ್ಯವಾಗಿ ನಿಂದಿಸಿ ಸುಳ್ಳು ಹೇಳಿಕೆ ದಾಖಿಸಿಕೊಂಡಿದ್ದರು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಮಕ್ಕಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು.

ಪೊಲೀಸರ ಕಿರುಕುಳ ಸಂಬಂಧ ಪೊಲೀಸ್ ಆಯುಕ್ತ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದರು. ಈ ಕುರಿತು ನ್ಯಾಯಾಲಯದಲ್ಲಿಯೂ ಖಾಸಗಿ ಮೊಕದ್ದಮೆ ಹೂಡಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News