×
Ad

ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅನರ್ಹಗೊಳಿಸಿ: ಡಿ.ಕೆ.ಶಿವಕುಮಾರ್

Update: 2020-11-02 22:06 IST

ಬೆಂಗಳೂರು, ನ.2: 'ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ವೆಚ್ಚ ಮಿತಿ ದಾಟಿ ಸೆಟ್ ಅಪ್ ಬಾಕ್ಸ್ ವಿತರಣೆ, ನಕಲಿ ಮತದಾರರ ಸೃಷ್ಟಿ, ಅಕ್ರಮ ಹಣ ಹಂಚಿಕೆ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಕಣದಿಂದ ತಕ್ಷಣ ಅನರ್ಹಗೊಳಿಸಬೇಕು' ಎಂದು ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜರಾಜೇಶ್ವರಿ ಚುನಾವಣಾ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಅದನ್ನು ಎಲ್ಲರೂ ನೋಡಿದ್ದಾರೆ. ನಾವು ಕೂಡ ಸರಕಾರ, ಚುನಾವಣಾ ಆಯೋಗ,  ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದರು.

ಮುನಿರತ್ನ ನಾಯ್ಡು ಮಾಧ್ಯಮಗಳ ಜತೆ ಮಾತನಾಡುವಾಗ 34 ಸಾವಿರ ಸೆಟ್ಟಾಪ್ ಬಾಕ್ಸ್ ಹಂಚಿರುವುದಾಗಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವುದಾಗಿ ಹೇಳಿದೆ. ನಾವು 50 ಸಾವಿರ ಸೆಟ್ ಟಾಪ್ ಬಾಕ್ಸ್ ಅಂತಾ ಹೇಳಿದ್ದೆವು. ಆದರೆ 34 ಸಾವಿರ ಕೊಟ್ಟಿದ್ದೇನೆ ಅಂತಾ ಬಿಜೆಪಿ ಅಭ್ಯರ್ಥಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

34 ಸಾವಿರ ಸೆಟ್ ಟಾಪ್ ಬಾಕ್ಸ್ ಗೆ ತಲಾ ಸಾವಿರದಂತೆ ಅಂದಾಜು 3.40 ಕೋಟಿ ರೂಪಾಯಿ ಆಗುತ್ತದೆ. ಇದನ್ನು ಉಚಿತವಾಗಿ ಹಂಚಿದ್ದಾರೆ. ಕನೆಕ್ಷನ್ ಒಂದು ತಿಂಗಳ ಶುಲ್ಕ 150 ರೂ. ಉಚಿತವಾಗಿ ಕೊಟ್ಟರೂ ಹೆಚ್ಚುವರಿ 51 ಲಕ್ಷ ರುಪಾಯಿ ಆಗುತ್ತದೆ. ಚುನಾವಣಾ ಆಯೋಗ ಹಾಗೂ ರಿಟನಿರ್ಂಗ್ ಆಫೀಸರ್ ಸೇರಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 173 (62) ಪ್ರಕಾರ ಅವರನ್ನು ಇವತ್ತೇ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಅವರ ಪಕ್ಷದಲ್ಲಿರುವ ಪಂಡಿತರಾಗಲಿ ಹಾಗೂ ನಾಯಕರಾಗಲಿ ಇದನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಅಭ್ಯರ್ಥಿಯೇ ಈ ಅಕ್ರಮವನ್ನು ಒಪ್ಪಿಕೊಂಡಿದ್ದು, ಸೆಟ್ ಟಾಪ್ ಬಾಕ್ಸ್ ಮೇಲೆ ಅವರ ಫೋಟೋ, ಹೆಸರು ಇದೆ. ಜತೆಗೆ ಟಿವಿ ಆನ್ ಮಾಡಿದ ತಕ್ಷಣ ಬರುವ ಅವರ ಫೋಟೋ ಮತ್ತು ಹೆಸರು ಜಾಹೀರಾತು ವೆಚ್ಚಕ್ಕೆ ಸೇರುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲ ರಾಜಕಾರಣಿಗಳು ಈ ಮಟ್ಟದ ಚುನಾವಣಾ ಅಕ್ರಮ ಕಂಡು ಅಚ್ಚರಿಗೊಂಡಿದ್ದಾರೆ. ಇದೊಂದನ್ನು ಬಿಜೆಪಿ ಅಭ್ಯರ್ಥಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಅಕ್ರಮ ಒಪ್ಪಿಕೊಂಡಿರುವ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇರಬೇಕೆ ಬೇಡವೇ ಎಂಬುದನ್ನು ಪ್ರಜ್ಞಾವಂತ ಮತದಾರ ಯೋಚಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News