ಆರ್‌ಆರ್ ನಗರ ಉಪಚುನಾವಣೆ: ಜನತೆ ಮತದಾನದತ್ತ ಒಲವು ತೋರದಿರಲು ಕಾರಣವೇನು ?

Update: 2020-11-03 17:06 GMT

ಬೆಂಗಳೂರು, ನ.3: ಕೊರೋನ ಸೋಂಕು ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಹಲವಾರು ಮಂಜಾಗ್ರತಾ ಕ್ರಮಗಳನ್ನು ರಾಜರಾಜೇಶ್ವರಿ ನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಕೈಗೊಂಡಿದ್ದರು ಮತದಾರರು ಮಾತ್ರ ಮತದಾನಕ್ಕೆ ಒಲವು ತೋರಲಿಲ್ಲ.

ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನ ಆದದ್ದು ಬಹಳ ಕಡಿಮೆ. ಈ ಉಪಚುನಾವಣೆ ಸಂದರ್ಭದಲ್ಲಿ ಕೊರೋನ ಸೋಂಕು ಆತಂಕ ಕೂಡ ಹೆಚ್ಚಿರುವ ಹಿನ್ನೆಲೆ ಹಾಗೂ ಕ್ಷೇತ್ರದ ಮತದಾರರಿಗೆ ರಜೆ ಸಿಗದ ಹಿನ್ನೆಲೆ ಮತದಾನ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಕೆಪಿಸಿಸಿ ಕಾರ್ಯದರ್ಶಿ ಡಾ.ಕೆ.ಟಿ. ರಾಜು ಪ್ರಕಾರ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರು ಹೆಚ್ಚಿರುವಂತಹ ಸ್ಥಳ. ಬೆಳಗ್ಗೆ ಶೇ.30ರಷ್ಟು ಮತದಾನವಾಗಿದೆ. ಸಂಜೆಯ ನಂತರ ಸ್ವಲ್ಪ ಪ್ರಮಾಣ ಕಡಿಮೆಯಾಗಿದ್ದು, ನಿರ್ಭೀತಿಯಿಂದ ಮತದಾನ ನಡೆದಿದೆ. ಬಿಡಿಎ ಲೇಔಟ್ ಭಾಗದ ಜನ ಸಾಕಷ್ಟು ಪ್ರಮಾಣದಲ್ಲಿ ಆಚೆ ಬರಲಿಲ್ಲ. ಇದರಿಂದಲೂ ಮತದಾನ ಪ್ರಮಾಣ ಕಡಿಮೆಯಾಗಿದೆ. ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ ಎಂದಿದ್ದಾರೆ.

ಕೆಪಿಸಿಸಿ ವೈದ್ಯರ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಜಾನಕಿ, ಈ ಭಾಗದ ಗಾರ್ಮೆಂಟ್ಸ್ ಗಳು ಹಾಗೂ ಕೆಲ ಕೈಗಾರಿಕೆಗಳಿಗೆ ರಜೆ ನೀಡಿಲ್ಲ. ಹೀಗಾಗಿ ಒಂದಿಷ್ಟು ಮತದಾನ ಕಡಿಮೆಯಾಗಿದೆ. ಶಿಕ್ಷಿತ ಹಾಗೂ ಪ್ರಜ್ಞಾವಂತ ಮತದಾರರು ಎಲ್ಲಾ ಕಡೆ ಮತದಾನದಲ್ಲಿ ಸಮರ್ಪಕವಾಗಿ ಭಾಗಿಯಾಗುತ್ತಿಲ್ಲ. ಇಲ್ಲಿಯೂ ಅದೇ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಜ್ಞಾವಂತ ಮತದಾರರು ಇದ್ದರೂ ಸಹ ಅವರು ಮತದಾನ ಕೇಂದ್ರದತ್ತ ಬಂದಿಲ್ಲ. ವಿವಿಧ ಖಾಸಗಿ ಕಂಪನಿ ಉದ್ಯೋಗಿಗಳು ಸಾಫ್ಟ ವೇರ್ ಇಂಜಿನಿಯರ್‍ಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅವರು ಮತದಾನದತ್ತ ಹೆಚ್ಚಿನ ಒಲವು ತೋರದಿರುವುದು ಸಾಕಷ್ಟು ಸಂಖ್ಯೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಒಂದೆಡೆ ಮೇಲ್ವರ್ಗದ ಜನರಿಗೆ ನಿರುತ್ಸಾಹ ಎದುರಾದರೆ ಕೆಳ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಉದ್ಯೋಗದಿಂದ ಬಿಡುವು ಸಿಗದಿರುವುದು ಮತದಾನ ಇಳಿಕೆಗೆ ಕಾರಣವಾಗಿದೆ ಎಂದು ಭೂತ್‍ಗಳಲ್ಲಿ ಕುಳಿತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ರಸ್ತೆಯಲ್ಲೆ ಗ್ಲೌಸ್ ಎಸೆದ ಮತದಾರರು: ಮತಗಟ್ಟೆಯಲ್ಲಿ ಮತದಾರರಿಗೆ ನೀಡುತ್ತಿರುವ ತೆಳು ರಬ್ಬರ್ ಗ್ಲೌಸ್‍ಗಳನ್ನು ಮತದಾನದ ಬಳಿಕ ಜನ ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಆರ್.ಆರ್ ನಗರದ ಬೂತ್ ನಂಬರ್ 137 ರಿಂದ 139ರ ಮುಂಭಾಗ ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್‍ಗಳು ಬೇಕಾಬಿಟ್ಟಿಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.

ಮತದಾನ ಮಾಡಿದ ನಟ-ನಟಿಯರು

ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಟರಾದ ದರ್ಶನ್, ಪ್ರೇಮ್, ದಿಗಂತ್ ಹಾಸ್ಯ ನಟ ನಟಿಯರಾದ ಅಮೂಲ್ಯ, ಕಾರುಣ್ಯರಾಮ್ ಮತದಾನ ಮಾಡಿದರು.

ಮತದಾನ ಮಾಡಿದ 7 ಸೋಂಕಿತರು

ಆರ್.ಆರ್. ನಗರದಲ್ಲಿ 1,500 ಜನ ಕೋವಿಡ್ ರೋಗಿಗಳಿದ್ದು, ಈ ಪೈಕಿ ಮತದಾರರ ಸಂಖ್ಯೆ 148 ಇದೆ. ಪಾಲಿಕೆಯಿಂದ ಕರೆ ಮಾಡಿದಾಗ 26 ಜನ ಮತದಾನ ಮಾಡಲು ಇಚ್ಛಿಸಿದ್ದರು. ಆದರೆ ಅಂತಿಮವಾಗಿ 7 ಜನ ಸೋಂಕಿತರು ಸಾರ್ವಜನಿಕ ಮಟಗಟ್ಟೆಗಳಲ್ಲಿ ಪ್ರತ್ಯೇಕ ಸಮಯದಲ್ಲಿ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ್ದಾರೆ.

ಚುನಾವಣಾ ಆರೋಗದ ಎಡವಟ್ಟು

ಆರ್.ಆರ್. ನಗರ ಬಿಇಟಿ ಸ್ಕೂಲ್‍ನಲ್ಲಿ ಚುನಾವಣಾ ಆಯೋಗ ಮಹಾ ಎಡವಟ್ಟು ಮಾಡಿದೆ ಎನ್ನಲಾಗಿದೆ. ಕೊರೋನ ಸೋಂಕಿತ ವ್ಯಕ್ತಿ ಮತದಾನ ಮಾಡುವ ಮುನ್ನ ಇದ್ದ ಕಾಳಜಿ ಮತದಾನದ ನಂತರ ಇರಲಿಲ್ಲ. ಚುನಾವಣಾ ಸಿಬ್ಬಂದಿ ಪಿಪಿಇ ಕಿಟ್ ತೆಗೆದು ಸ್ಯಾನಿಟೈಸ್ ಮಾಡುವ ಮೊದಲೇ ಮತದಾರರು ಓಡಾಟ ನಡೆಸಿದರು. ಸಿಬ್ಬಂದಿ ಪಿಪಿಇ ಕಿಟ್ ಬದಲಾಯಿಸುವ ಜಾಗದಲ್ಲೇ ಹಿರಿಯ ಮತದಾರರು ಓಡಾಟ ನಡೆಸಿರುವುದು ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News