ಬ್ಯಾಟ್ಸ್ ಮನ್‌ಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಿ: ಸಚಿನ್

Update: 2020-11-04 02:07 GMT

 ಮುಂಬೈ: ಕ್ರೀಡಾಂಗಣದಲ್ಲಿ ವೃತ್ತಿಪರ ಕ್ರಿಕೆಟ್ ನಡೆಯುವ ವೇಳೆ ಸುರಕ್ಷತೆಯ ದೃಷ್ಠಿಯಿಂದ ಬ್ಯಾಟ್ಸ್‌ಮನ್‌ಗಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ್ನು ಆಗ್ರಹಿಸಿದ್ದಾರೆ

ಕಿಂಗ್ಸ್ ಇಲೆವೆನ್ ತಂಡದ ನಿಕೋಲಸ್ ಪೂರನ್ ರನೌಟ್ ಮಾಡಲು ಎಸೆದ ಚೆಂಡು ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ವಿಜಯ್ ಶಂಕರ್ ತಲೆಗೆ ಬಡಿದಿರುವ ವೀಡಿಯೊವನ್ನು ಸಚಿನ್ ತೆಂಡುಲ್ಕರ್ ಹಂಚಿಕೊಂಡಿದ್ದಾರೆ.

  ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಶಂಕರ್ ತಲೆಗೆ ಚೆಂಡು ಬಡಿಯುತ್ತಿದ್ದಂತೆ ಅವರು ಕುಸಿದು ಬಿದ್ದಿದ್ದಾರೆ . ಅದೃಷ್ಟವಶಾತ್ 29 ವರ್ಷದ ವಿಜಯ್ ಶಂಕರ್ ಹೆಲ್ಮೆಟ್ ಧರಿಸಿದ್ದ ಕಾರಣದಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.

 ‘‘ಆಟವು ವೇಗವಾಗಿದೆ ಆದರೆ ಅದು ಸುರಕ್ಷಿತವಾಗಿದೆಯೇ? ಇತ್ತೀಚೆಗೆ ನಾವು ಅಸಹ್ಯಕರವಾದ ಘಟನೆಗೆ ಸಾಕ್ಷಿಯಾಗಿದ್ದೇವೆ. ವೃತ್ತಿಪರ ಕ್ರಿಕೆಟ್‌ನಲ್ಲಿ ಬೌಲಿಂಗ್ ನಡೆಸುವ ಬೌಲರ್ ಸ್ಪಿನ್ನರ್ ಅಥವಾ ವೇಗಿ ಆಗಿರಲಿ. ಅವರನ್ನು ಎದುರಿಸುವ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್ ಧರಿಸುವುದನ್ನು ಐಸಿಸಿ ಕಡ್ಡಾಯಗೊಳಿಸಬೇಕು. ಈ ಮನವಿಯನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು’’ ಎಂದು ವಿನಂತಿಸಿ ಸಚಿನ್ ಟ್ವೀಟ್ ಮಾಡಿದ್ದಾರೆ.

2014ರ ನವೆಂಬರ್‌ನಲ್ಲಿ ನಡೆದ ದೇಶೀಯ ಪಂದ್ಯವೊಂದರಲ್ಲಿ ಸೀನ್ ಅಬಾಟ್ ಬೌನ್ಸರ್ ಬಡಿದು ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಮೃತಪಟ್ಟ ಬಳಿಕ ಆಟಗಾರರ ಸುರಕ್ಷತೆಯ ಕುರಿತು ಚರ್ಚೆ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News