ಕೊರೋನ ಸೋಂಕು : ಒಂದೇ ದಿನ ಲಕ್ಷದ ಗಡಿ ದಾಟಿದ ಅಮೆರಿಕ

Update: 2020-11-06 03:50 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಗಾದಿಯ ಹಣಾಹಣಿ ಕೊನೇಯ ಹಂತ ತಲುಪಿರುವ ನಡುವೆಯೇ ದೇಶದಲ್ಲಿ ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ವರದಿಯಾಗಿರುವುದು ತಲ್ಲಣಕ್ಕೆ ಕಾರಣವಾಗಿದೆ.

ದೇಶದಲ್ಲಿ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಸೋಂಕು ಪ್ರಕರಣ ಕಾಣಿಸಿಕೊಳ್ಳುವ ಮತ್ತು ದೊಡ್ಡ ಸಂಖ್ಯೆಯಲ್ಲಿ ಜನ ಸೋಂಕಿಗೆ ಬಲಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ದೇಶದಲ್ಲಿ ಗುರುವಾರ 1,06,414 ಕೊರೋನ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96 ಲಕ್ಷಕ್ಕೇರಿದೆ ಎಂದು ಜಾನ್ ಹಾಕಿನ್ಸ್ ವಿವಿ ಕ್ರೋಢೀಕರಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ದೇಶಾದ್ಯಂತ ಸೋಂಕು ವ್ಯಾಪಕವಾಗುತ್ತಿದ್ದು, ಇನ್ನೂ ನಿರ್ಧಾರವಾಗದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ರಾಜ್ಯಗಳೂ ಇದರಲ್ಲಿ ಸೇರಿವೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸೋಂಕು ಪರೀಕ್ಷೆ ಮಾತ್ರ ನಿಧಾನವಾಗಿ ಹೆಚ್ಚುತ್ತಿದೆ. ನ. 4ರಂದು ಕೊನೆಗೊಂಡ ವಾರದಲ್ಲಿ ಪ್ರಕರಣಗಳ ಸಂಖ್ಯೆ 7.1% ಏರಿಕೆಯಾಗಿದ್ದರೆ, ಪರೀಕ್ಷೆ ಸಂಖ್ಯೆ 6.2% ಮಾತ್ರ ಹೆಚ್ಚಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಗುರುವಾರ ಸತತ ಮೂರನೇ ದಿನ ಅಮೆರಿಕದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಕೂಡಾ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಯೂರೋಪ್‌ನಲ್ಲಿ ಕೂಡಾ ಹೊಸ ಪ್ರಕರಣಗಳು ಹೆಚ್ಚುತ್ತಿದ್ದು ಹಲವು ದೇಶಗಳು ಲಾಕ್‌ಡೌನ್ ಘೋಷಿಸಿವೆ.

ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಓಹಿಯೋ ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರು ಪ್ರಕರಣಗಳ ಹೆಚ್ಚಳ ಬಗ್ಗೆ ಆತಂಕ ವ್ಯಕ್ತಪಡಿಸಿ ದ್ದಾರೆ. ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪಾವೆಲ್ ಕೂಡಾ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News