ಕನ್ನಡ ನಾಡಲ್ಲಿ ಕನ್ನಡ ಬಳಸದಿದ್ದರೆ ಬೇರೆಲ್ಲೂ ಬೆಳೆಸಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ

Update: 2020-11-07 12:59 GMT

ಬೆಂಗಳೂರು, ನ.7: ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಲಿ. ಕನ್ನಡ ನಾಡಲ್ಲಿ ಕನ್ನಡ ಬಳಸದಿದ್ದರೆ ಬೇರೆಲ್ಲೂ ಬೆಳೆಸಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರ, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಕನ್ನಡ ಭಾಷೆಯ ಬೆಳವಣಿಗೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಅಕ್ಟೋಬರ್ 31, 2021ರವರೆಗೂ ಭಾಷೆ, ಸಾಹಿತ್ಯ ಹಾಗೂ ಕಲೆಗಳ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದರು.

ಆಧುನಿಕ ಯುಗದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ನಮ್ಮ ಭಾಷೆಯನ್ನು ಸಜ್ಜಗೊಳಿಸಬೇಕಾಗಿದೆ. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಎನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿದೆ. ಭಾಷೆ ಮತ್ತು ಜನ್ಮಭೂಮಿ ನಮಗೆ ಹೆತ್ತ ತಾಯಿಗೆ ಸಮವೆಂದು ಅವರು ಬಣ್ಣಿಸಿದರು.

ನಾಡಿನ ಮೂಲೆ-ಮೂಲೆಗಳಲ್ಲಿ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಶೋಧಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ನಾಡು-ನುಡಿಯ ಅಭಿವೃದ್ದಿಗೆ ಈ ಸಾಧಕರ ಸೇವೆ ಅಪಾರ. ಸಾಮಾನ್ಯರಲ್ಲಿ ಅಸಮಾನ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರೆಲ್ಲರೂ ತಮ್ಮದೇ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆಂದು ಅವರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿಯಂತಹ ಒಳ್ಳೆಯ ಖಾತೆ ಇನ್ನೊಂದಿಲ್ಲ. ಸಂಸ್ಕೃತಿಯನ್ನು ಕಟ್ಟುವ ಕೆಲಸ ನಿಜಕ್ಕೂ ನನಗೆ ಅತ್ಯಂತ ಸಂತೋಷ ತಂದಿದೆ. ಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತ ಹಾಗೂ ಪ್ರಾಚೀನವಾದದ್ದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ 1 ಲಕ್ಷ ರೂ. ನಗದು ಮತ್ತು 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಈ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್ ಮತ್ತಿತರರಿದ್ದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಗೊಂಡಿರುವುದರಿಂದ ಸಚಿವ ಸ್ಥಾನದಿಂದ ನನ್ನನ್ನು ಮುಕ್ತಗೊಳಿಸಬೇಕು. ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡು ಬಿಡುಗಡೆ ಮಾಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶ ಮಾಡಿಕೊಡಬೇಕು.

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News