ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಖಂಡಿಸಿ ಸಿಪಿಎಂ ಪ್ರತಿಭಟನೆ

Update: 2020-11-07 15:46 GMT

ಬೆಂಗಳೂರು, ನ.7: ಕೇಂದ್ರ ಸರಕಾರ ದೇಶದ ಜನತೆಯನ್ನು ಅದಾನಿ, ಅಂಬಾನಿ ಕಂಪೆನಿಗಳ ಜೀತದಾಳುಗಳಾಗಿ ಮಾಡಲು ಹೊರಟಿದೆ ಎಂದು ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಿಪಿಎಂ ಪಕ್ಷದ ವತಿಯಿಂದ ಕೇಂದ್ರ ಸರಕಾರ ರೈತ, ಕಾರ್ಮಿಕರ ವಿರೋಧಿ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಿರುವುದರ ವಿರುದ್ಧ ಹಾಗೂ ವಿದ್ಯುತ್‍ದರ ಏರಿಕೆ ಖಂಡಿಸಿ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ಆರೋಗ್ಯ, ಉದ್ಯೋಗ ಕಳೆದುಕೊಂಡಿರುವ ಜನತೆಯನ್ನು ಕೇಂದ್ರ ಸರಕಾರದ ನೀತಿಗಳು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆಪಾಧಿಸಿದರು.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ಕಾರ್ಮಿಕ, ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳು ಕಳೆದ ಅಧಿವೇಶನದ ಅವಧಿಯಲ್ಲಿ ವಿಧಾನಪರಿಷತ್‍ನಲ್ಲಿ ಅಂಗೀಕಾರಗೊಳ್ಳಲಿಲ್ಲ. ಆದರೂ ರಾಜ್ಯ ಸರಕಾರ ಪುನಃ ಸುಗ್ರೀವಾಜ್ಞೆಗಳ ಮೂಲಕ ಮತ್ತೊಮ್ಮೆ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆ. ಸುಗ್ರೀವಾಜ್ಞೆಗಳ ಮೂಲಕ ಹೊರಡಿಸಿದ್ದ ಕಾಯ್ದೆಯು ಒಂದು ಸಲ ಅಂಗೀಕಾರಗೊಳ್ಳದಿದ್ದರೆ, ಪುನಃ ಎರಡನೇ ಸಲ ಆ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನ ಲಾಕ್‍ಡೌನ್‍ನಿಂದ ಸಮಸ್ಯೆಗೆ ಸಿಲುಕಿರುವ ಜನತೆಗೆ ಆತ್ಮವಿಶ್ವಾಸ, ಆರ್ಥಿಕ ಚೈತನ್ಯ ತುಂಬಲು ಪ್ರತಿಕುಟುಂಬಕ್ಕೆ 7500 ರೂ. ನೇರ ವರ್ಗಾವಣೆ, ಉಚಿತ ಧಾನ್ಯಗಳು, ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಕ್ಕೆ ವಿಸ್ತರಿಸುವುದು ಸೇರಿದಂತೆ ಮತ್ತಿತರ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ವಿರೋಧ ಪಕ್ಷಗಳು ಒತ್ತಾಯ ಮಾಡಿದೆವು. ಆದರೆ, ಕೇಂದ್ರ ಸರಕಾರ ಕೇವಲ ಅದಾನಿ, ಅಂಬಾನಿಯ ಆರ್ಥಿಕ ಬೆಳವಣಿಗೆಗೆ ಮಾತ್ರ ಕೇಂದ್ರೀಕರಿಸಿವೆ ಎಂದು ಅವರು ಟೀಕಿಸಿದರು.

ಕೇಂದ್ರ ಸರಕಾರ ತರುತ್ತಿರುವ ನೀತಿಗಳು ಬಡವರು ಭೂಮಿಯ ಮೇಲೆ ಬದುಕಲೇಬಾರದೆಂಬ ರೀತಿಯಲ್ಲಿವೆ. ತುಮಕೂರಿನಿಂದ ಬೆಂಗಳೂರಿಗೆ ರೈಲ್ವೆ ಪ್ರಯಾಣಕ್ಕೆ 20 ರೂ. ಆದರೆ, ಪ್ಲಾಟ್‍ಫಾರಂ ಟಿಕೆಟ್ 50ರೂ.ಇದೆ. ಇಂತಹ ನೀತಿಗಳು ಜನತೆಯನ್ನು ಬದುಕಲು ಬಿಡುತ್ತವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಜನತೆಯ ಐಕ್ಯ ಹೋರಾಟದಿಂದ ಮಾತ್ರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ನ.26 ರಂದು ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಪ್ರತಿರೋಧದ ದಿನವಾಗಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಜನತೆ ಭಾಗವಹಿಸುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News