ಬೆಂಗಳೂರು: 'ಪಟಾಕಿ ನಿಷೇಧ'ದ ವಿರುದ್ಧ ಪಟಾಕಿ ಸಿಡಿಸುವ ಮೂಲಕ ಪ್ರತಿಭಟನೆ

Update: 2020-11-08 13:43 GMT

ಬೆಂಗಳೂರು, ನ. 8: ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ಮಾಡಿರುವ ಕ್ರಮ ಸಂಪ್ರದಾಯಕ್ಕೆ ಮಾಡಿರುವ ಅಪಚಾರ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರವಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಟಾಕಿ ಸಿಡಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂರ್ಭದಲ್ಲಿ ಮಾತನಾಡಿದ ಅವರು, ಪಟಾಕಿ ಇಲ್ಲದಿದ್ದರೆ ದೀಪಾವಳಿ ಹಬ್ಬವೇ ಇಲ್ಲ. ದೀಪಾವಳಿ ಹಬ್ಬ ಯಾವುದೇ ಒಂದು ಪ್ರದೇಶ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇದು ದೇಶಾದ್ಯಂತ ಆಚರಿಸುವ ಸಂಪ್ರದಾಯ ಹಬ್ಬವಾಗಿದೆ. ಪಟಾಕಿ ನಿಷೇಧಿಸುವುದರಿಂದ ಸಂಪ್ರದಾಯಕ್ಕೆ ಸರಕಾರ ಕಳಂಕ ತಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೂಡಲೇ ಈ ನಿಷೇಧ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಟಾಕಿ ಹಚ್ಚುವುದರಿಂದ ಕೊರೋನ ಬರುತ್ತದೆ ಎಂಬ ಸರಕಾರದ ಹೇಳಿಕೆ ಅತ್ಯಂತ ಅವೈಜ್ಞಾನಿಕವಾಗಿದೆ. ಕೊರೋನ ಸಾಂಕ್ರಾಮಿಕ ರೋಗ. ಪಟಾಕಿಯಿಂದ ಬರುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಕೊರೋನ ಸೋಂಕು ಜನರ ಮುನ್ನೆಚ್ಚರಿಕೆ ಕ್ರಮದಿಂದ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಜನ ಎಚ್ಚರದಿಂದ ಪಟಾಕಿ ಸಿಡಿಸಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸುವಂತಾಗಲಿ. ಸರಕಾರ ಪಟಾಕಿ ನಿಷೇಸುವ ಕ್ರಮವನ್ನು ಜಾರಿಗೊಳಿಸಿ ಜನರನ್ನು ಗೊಂದಲದಲ್ಲಿಟ್ಟಿದೆ. ಹಸಿರು, ಕೆಂಪು ಪಟಾಕಿ ಎಂದು ಹೇಳಿ ಪಟಾಕಿ ಮಾರಾಟಗಾರರು, ಉತ್ಪಾದಕರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಅವರು ಆರೋಪಿಸಿದರು.

ಪಟಾಕಿ ನಿಷೇಧಿಸುವುದಿದ್ದರೆ ಆರು ತಿಂಗಳ ಮುಂಚೆಯೇ ನಿಷೇಧಿಸಬೇಕಿತ್ತು. ಪಟಾಕಿ ಉತ್ಪಾದಕರು ತಮ್ಮ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದರು. ಕೋಟ್ಯಂತರ ರೂ. ವೆಚ್ಚ ಮಾಡಿ ಪಟಾಕಿ ಉತ್ಪಾದಿಸಿ ಮಳಿಗೆ ತೆರೆದವರ ಪರಿಸ್ಥಿತಿ ಏನಾಗಬೇಕು? ಸರಕಾರ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News