ಏಳು ವಾರಗಳ ಬಳಿಕ ಮತ್ತೆ ಏರುಹಾದಿಯಲ್ಲಿ ಕೊರೋನ ಸೋಂಕು

Update: 2020-11-09 03:36 GMT

ಹೊಸದಿಲ್ಲಿ : ದೇಶದಲ್ಲಿ ಸೆಪ್ಟೆಂಬರ್ ಮಧ್ಯದ ಬಳಿಕ ಸತತ ಏಳುವಾರಗಳ ಕಾಲ ಇಳಿಕೆ ಕಂಡಿದ್ದ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಏರುಹಾದಿಯಲ್ಲಿದೆ.

ಈ ವಾರದಲ್ಲಿ ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆಯೂ ಅಲ್ಪ ಹೆಚ್ಚಳ ಕಂಡಿದೆ. ದೀಪಾವಳಿ ಸಡಗರಕ್ಕೆ ದೇಶ ಸಜ್ಜಾಗುತ್ತಿರುವ ನಡುವೆ ನವೆಂಬರ್ ಮೊದಲ ವಾರದಲ್ಲಿ 3.25 ಲಕ್ಷ ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಇದಕ್ಕೂ ಹಿಂದಿನ ವಾರ 3.19 ಲಕ್ಷ ಪ್ರಕರಣಗಳು ವರದಿಯಾಗಿದ್ದವು.

ಮುಖ್ಯವಾಗಿ ದೈನಿಕ ಪ್ರಕರಣಗಳು ಇಳಿಮುಖವಾಗಿದ್ದ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ರವಿವಾರ ಮತ್ತೆ ಹೆಚ್ಚಿದೆ. ರಾಜ್ಯದಲ್ಲಿ 5092 ಹೊಸ ಪ್ರಕರಣಗಳು ವರದಿಯಾಗಿದ್ದು 110 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 17,18,858ಕ್ಕೇರಿದ್ದು, ಮೃತರ ಸಂಖ್ಯೆ 45,240ಕ್ಕೆ ಹೆಚ್ಚಿದೆ.

ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ದೇಶದಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾದ ಕುಖ್ಯಾತಿಗೆ ರಾಜಧಾನಿ ದೆಹಲಿ ಪಾತ್ರವಾಗಿದೆ. ರವಿವಾರ 7745 ಹೊಸ ಪ್ರಕರಣಗಳು ವರದಿಯಾಗಿದ್ದು, 77 ಮಂದಿ ಸಾವನ್ನಪ್ಪಿದ್ದಾರೆ.

ಸಕ್ರಿಯ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಇಳಿಕೆ ಕಂಡಿದ್ದರೂ, ಹರ್ಯಾಣ, ದೆಹಲಿ ಮತ್ತು ಮಿಜೋರಾಂನಲ್ಲಿ ಹೆಚ್ಚಳವಾಗಿದೆ. ಇದೀಗ ಒಟ್ಟು 5.12 ಲಕ್ಷ ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ದೆಹಲಿಯಲ್ಲಿ 40,258 ಹೊಸ ಪ್ರಕರಣಗಳಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಇದು ಶೇಕಡ 1.35ರಷ್ಟು ಅಧಿಕ. ಹರ್ಯಾಣದಲ್ಲಿ 2.32% ಏರಿಕೆ ಕಂಡುಬಂದಿದ್ದು, 15713 ಸಕ್ರಿಯ ಪ್ರಕರಣಗಳಿವೆ. ಮಿಜೋರಾಂನಲ್ಲಿ ಒಟ್ಟು 562 ಸಕ್ರಿಯ ಪ್ರಕರಣಗಳಿದ್ದು, 3.12% ಏರಿಕ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News