×
Ad

ಬೆಂಗಳೂರು ಜಲಮಂಡಳಿಯಲ್ಲಿ 21,300 ಅಕ್ರಮ ಸಂಪರ್ಕಗಳು

Update: 2020-11-09 23:14 IST

ಬೆಂಗಳೂರು, ನ.9: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರತೀ ವರ್ಷ ನೀರಿನ ಸೋರಿಕೆ ಪ್ರಮಾಣ ಶೇ.35ರಷ್ಟಿದ್ದು, ಅಕ್ರಮ ಸಂಪರ್ಕಗಳು 21,300ರಷ್ಟಿವೆ.

2017-18ರಲ್ಲಿ ಶೇ.40ರಷ್ಟು ನೀರು ಸೋರಿಕೆಯಾಗಿತ್ತು. ಈಗದರ ಪ್ರಮಾಣ ಶೇ.35ರಷ್ಟಕ್ಕೆ ಇಳಿದಿದೆ. ಕಳೆದ ವರ್ಷ ಶೇ.3ರಷ್ಟು ನೀರು ಸೋರಿಕೆ ತಡೆಗಟ್ಟಲು ಸುಮಾರು 545.50 ಕೋಟಿ ರೂ. ವ್ಯಯಿಸಿದೆ. ಆದರೆ, ಈ ವರ್ಷದ ಖರ್ಚಿನ ಮಾಹಿತಿ ನೀಡಲು ಜಲಮಂಡಳಿ ಹಿಂದೇಟು ಹಾಕಿದೆ.

ನಗರದ ಎಲ್ಲೆಲ್ಲಿ ನೀರಿನ ಸಮಸ್ಯೆ: ಟಿ.ದಾಸರಹಳ್ಳಿ ಸಮೀಪದ ಸಿಡೇದಹಳ್ಳಿ, ಪಟ್ಟೇಗಾರಪಾಳ್ಯ ಮುಖ್ಯರಸ್ತೆಯ ಸಂಪಿಗೆ ಬಡಾವಣೆ, ಉಲ್ಲಾಳ ವಾರ್ಡ್‍ನ ನಾಗದೇವನಹಳ್ಳಿ, ವಸಂತಪುರ ವಾರ್ಡ್‍ನ ಕೋಣನಕುಂಟೆ ಕ್ರಾಸ್, ರಾಜಾಜಿನಗರದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ.

ನೀರು ಸಂಸ್ಕರಣೆ: ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೂಲಕ ನೀರು ಶುದ್ಧೀಕರಿಸಿ ಕೆರೆ ತುಂಬುವ ಕಾರ್ಯ, ಉದ್ಯಾನವನಗಳಿಗೆ ಹಂಚುವ ಕಾರ್ಯ ಮಾಡುತ್ತಿದೆ. ಸದ್ಯ 29 ಎಸ್‍ಟಿಪಿಗಳು ಕೆಲಸ ಮಾಡುತ್ತಿದ್ದರೂ ಪೂರ್ಣ ಪ್ರಮಾಣದ ಕೊಳಚೆ ನೀರು ಸಂಸ್ಕರಣೆಯಾಗುತ್ತಿಲ್ಲ. 2021 ಮಾರ್ಚ್-ಏಪ್ರಿಲ್ ವೇಳೆಗೆ ಪೂರ್ಣ ಪ್ರಮಾಣ ತ್ಯಾಜ್ಯ ನೀರು ಸಂಸ್ಕರಣೆಗೆ ಜಲಮಂಡಳಿ ಯೋಜನೆ ರೂಪಿಸಿದೆ.

ಬೆಂಗಳೂರಿನಲ್ಲಿ ಪ್ರಸ್ತುತ 1,440 ಎಮ್‍ಎಲ್‍ಡಿಯಷ್ಟು ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದೆ. ನಗರದಲ್ಲಿ 29 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕೆಲಸ ಮಾಡುತ್ತಿದ್ದು, 1157.5 ಎಮ್‍ಎಲ್‍ಡಿಯಷ್ಟು ತ್ಯಾಜ್ಯ ನೀರು ಸಂಸ್ಕರಣೆ ಮಾಡುವ ಸಾಮರ್ಥ್ಯ ಇದೆ. ನಗರದಲ್ಲಿ 850 ಎಮ್‍ಎಲ್‍ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುತ್ತಿದೆ. ಕೆಲವೆಡೆ ಕಾಮಗಾರಿಗಳು, ಲಿಂಕಿಂಗ್ ಕೆಲಸಗಳು ನಡೆಯುತ್ತಿರುವುದರಿಂದ ಕೆಲಸ ನಡೆಯುತ್ತಿದೆ. ಮಾರ್ಚ್-ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಒಟ್ಟು ಸಾಮರ್ಥ್ಯದಷ್ಟೇ ಅಂದರೆ 1,157 ಎಮ್‍ಎಲ್‍ಡಿ ಚರಂಡಿ ನೀರು ಸಂಸ್ಕರಣೆಯಾಗಲಿದೆ. ಇನ್ನು ಹೆಬ್ಬಾಳ ಸೇರಿದಂತೆ ನಾಲ್ಕು ಕಡೆ ಹೊಸದಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ನಿರ್ಮಾಣವಾಗುತ್ತಿದ್ದು, 2021ರ ಮಾರ್ಚ್-ಏಪ್ರಿಲ್ ವೇಳೆಗೆ 1,582.5 ಎಮ್‍ಎಲ್‍ಡಿನಷ್ಟು ತ್ಯಾಜ್ಯ ನೀರು ಸಂಸ್ಕರಿಸಬಹುದು ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News