ಐದನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿದ ಮುಂಬೈ ಇಂಡಿಯನ್ಸ್

Update: 2020-11-11 00:59 GMT
Photo: Twitter

ದುಬೈ: ಐಪಿಎಲ್ 2020 ಆವೃತ್ತಿಯ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ್ದು, 5ನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿದೆ. ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಕಾತರದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನಸು ಭಗ್ನಗೊಂಡಿದೆ.

ಗೆಲುವಿಗೆ 157 ರನ್ ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ 18.4 ಓವರ್ ಗಳಲ್ಲಿ ಗುರಿ ತಲುಪಿತು. ಅಮೋಘ ಬ್ಯಾಟಿಂಗ್‌ ಪ್ರದರ್ಶನ ನಡೆಸಿದ ನಾಯಕ ರೋಹಿತ್ ಶರ್ಮಾ (68) ತಮ್ಮ ತಂಡಕ್ಕೆ ಸುಲಭ ಜಯ ಸಿಗಲು ಕಾರಣವಾದರು. ಡಿಕಾಕ್ 20, ಇಶಾನ್ ಕಿಶಾನ್ 33 ರನ್ ಗಳಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್ ಪರ ನೋರ್ಟ್ಜೆ 2, ರಬಾಡ 1, ಸ್ಟೋನಿಸ್ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 156 ರನ್ ಗಳಿಸಿತ್ತು. ಬೃಹತ್ ಮೊತ್ತ ದಾಖಲಿಸುವ ಯೋಚನೆಯಲ್ಲಿ ಬ್ಯಾಟಿಂಗಿಗಿಳಿದ ಡೆಲ್ಲಿಗೆ ಮೊದಲ ಎಸೆತದಲ್ಲೇ ಆರಂಭಿಕ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದ ಮಾರ್ಕಸ್‌ ಸ್ಟೋನಿಸ್‌ ಈ ಬಾರಿ ಸೊನ್ನೆ ಸುತ್ತಿದರು. ಬಳಿಕ ಮೂರನೇ ಓವರ್ ನಲ್ಲಿ ಡೆಲ್ಲಿಗೆ ಮತ್ತೊಂದು ಆಘಾತ ನೀಡಿದ ಟ್ರೆಂಟ್‌ ಬೌಲ್ಟ್, ‌ಅಜಿಂಕ್ಯ ರಹಾನೆಯ ವಿಕೆಟ್ ಕಬಳಿಸಿದರು. ಧವನ್ 15 ರನ್ ಗಳಿಸಿ ನಿರ್ಗಮಿಸಿದರು.

ಈ ವೇಳೆ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಆಸರೆಯಾದರು. ಪಂತ್ 56 (38 ಎಸೆತ) ರನ್ ಗಳಿಸಿ ಔಟಾದರೆ, ಅಯ್ಯರ್ 65 (50 ಎಸೆತ) ಬಾರಿಸಿ ಔಟಾಗದೇ ಉಳಿದರು.

ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 3, ಕಲ್ಟರ್ ನೈಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ನಲ್ಲಿ ಮಣಿಸಿ ಚಾಂಪಿಯನ್ ಆಗಿತ್ತು. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದ್ದ ಡೆಲ್ಲಿಯನ್ನು ಮಣಿಸಿ, ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. 

ಮುಂಬೈ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ(5) ಪ್ರಶಸ್ತಿ ಗೆದ್ದ ತಂಡವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ (3) ನಂತರದ ಸ್ಥಾನದಲ್ಲಿದೆ. ಕೊಲ್ಕತ್ತಾ 2, ಸನ್ ರೈಸರ್ಸ್ ಹೈದರಬಾದ್, ಡೆಕ್ಕನ್ ಚಾರ್ಜರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಲಾ 1 ಬಾರಿ ಚಾಂಪಿಯನ್ ಆಗಿದೆ. ಈ ಪೈಕಿ ಮುಂಬೈ ಮತ್ತು ಚೆನ್ನೈ ಮಾತ್ರ ಸತತ ಪ್ರಶ್ತಿಗಳನ್ನು ಗೆದ್ದುಕೊಂಡಿದೆ. ಚೆನ್ನೈ 2010 ಹಾಗೂ 2011 ರಲ್ಲಿ ಚಾಂಪಿಯನ್ ಆಗಿದ್ದು, ಮುಂಬೈ 2019 ಮತ್ತು 2020 ರಲ್ಲಿ ಪ್ರಶಸ್ತಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News