ಆರ್.ಆರ್.ನಗರ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್
ಬೆಂಗಳೂರು, ನ. 10: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ(ಜೆಡಿಎಸ್)ದ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕೇವಲ 10,269 ಮತಗಳನ್ನು ಗಳಿಸುವ ಮೂಲಕ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಪಕ್ಷ ನೆಲ ಕಚ್ಚಿದೆ.
ಠೇವಣಿ ಉಳಿಸಿಕೊಳ್ಳಲು ಒಟ್ಟಾರೆ ಚಲಾವಣೆಯಾದ ಮತಗಳ ಪೈಕಿ ಶೇ.10ರಷ್ಟು ಮತಗಳನ್ನು ಅಭ್ಯರ್ಥಿ ಗಳಿಸಬೇಕು. ಆರ್‍ಆರ್ ನಗರ ಕ್ಷೇತ್ರದಲ್ಲಿ ಒಟ್ಟು 2,06,991 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,990 ಮತಗಳನ್ನು ಗಳಿಸುವ ಮೂಲಕ 58,113 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದರೆ, ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದು, ಠೇವಣಿ ನಷ್ಟ ಅನುಭವಿಸಿದ್ದಾರೆ.
ಮತ ಎಣಿಕೆ ಆರಂಭದಿಂದಲೂ ಜೆಡಿಎಸ್ ಪಕ್ಷ ನಿರೀಕ್ಷೆಯಂತೆ ಮತಗಳನ್ನು ಗಳಿಸಲೇ ಇಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಎಚ್.ರಾಮಚಂದ್ರ ಅವರು 19,509 ಮತಗಳನ್ನು ಗಳಿಸಿದ್ದರು. ಆದರೆ, ಇದೀಗ ಜೆಡಿಎಸ್ ಅದಕ್ಕಿಂತ ಕಡಿಮೆ ಮತಗಳನ್ನು ಗಳಿಸುವ ಮೂಲಕ ಹೀನಾಯವಾಗಿ ಸೋಲನ್ನು ಅನುಭವಿಸಿದೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹಿತ ಹಲವು ಮುಖಂಡರು ಪ್ರಚಾರ ನಡೆಸಿದರೂ ತನ್ನ ಭದ್ರ ನೆಲೆಯಾಗಿದ್ದ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಪಕ್ಷದ ಎರಡನೇ ಹಂತದ ಮುಖಂಡರ ವಲಸೆ ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ತಮ್ಮ ಬೆಂಬಲಕ್ಕಿದೆ ಎಂದು ನಂಬಿದ್ದ ಜೆಡಿಎಸ್ ಪಕ್ಷಕ್ಕೆ ಆ ಸಮುದಾಯ ಎಷ್ಟರ ಮಟ್ಟಿಗೆ ಬೆಂಬಲ ನೀಡಿದೆ ಎಂಬುದು ಉಪಚುನಾವಣೆ ಫಲಿತಾಂಶದಿಂದ ಗೊತ್ತಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ `ಪರ್ಯಾಯ' ಪ್ರಾದೇಶಿಕ ಪಕ್ಷ ಜೆಡಿಎಸ್ ಎಂದು ಹೇಳುತ್ತಿದ್ದರೂ ಉಪಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ತನ್ನದೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.