ಬೈಡನ್ ಗೆಲುವೆಂದರೆ ಟ್ರಂಪಿಸಂನ ಸೋಲೇ?

Update: 2020-11-10 19:30 GMT

ಡೆಮಾಕ್ರಟರು ಮತ್ತು ರಿಪಬ್ಲಿಕನ್ನರ ನಡುವೆ ಅಮೆರಿಕದ ದಮನಿತ ಜನತೆಗೆ ಹೆಚ್ಚು ವ್ಯತ್ಯಾಸಗಳೇನೂ ಕಂಡು ಬರುತ್ತಿಲ್ಲ. ದೇಶದೊಳಗೆ ಕಾರ್ಪೊರೇಟ್ ಶಕ್ತಿಗಳ ಪರವಾಗಿ ಕಾರ್ಮಿಕರ ಶೋಷಣೆ ಮಾಡುವಲ್ಲಿ, ಸಂಪತ್ತಿನ ಕೇಂದ್ರೀಕರಣ ಹೆಚ್ಚಿಸುವಲ್ಲಿ, ಕರಿಯರ ಮೇಲೆ ವ್ಯವಸ್ಥಿತ ತಾರತಮ್ಯ ಮಾಡುವಲ್ಲಿ, ಜಗತ್ತನ್ನು ತನ್ನಿಷ್ಟಕ್ಕೆ ತಕ್ಕಂತೆ ಮಣಿಸಲು ಮಿಲಿಟರಿ ಶಕ್ತಿಯನ್ನು ಬಳಸುವಲ್ಲಿ ರಿಪಬ್ಲಿಕನ್ನರು ಮತ್ತು ಡೆಮಾಕ್ರಟರುಗಳ ನಡುವೆ ಇರುವ ವ್ಯತ್ಯಾಸ ಕೇವಲ ಮಾತುಗಳಲ್ಲೇ ಹೊರತು ಕೃತಿಗಳಲ್ಲಲ್ಲ. 


ಇಡೀ ಜಗತ್ತು ಆತಂಕ ಹಾಗೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಅಮೆರಿಕದ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಇಡೀ ಪ್ರಜ್ಞಾವಂತ ಜಗತ್ತೇ ಬಯಸುತ್ತಿದ್ದಂತೆ ಟ್ರಂಪ್ ಸೋತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಬೈಡನ್‌ಗೆದ್ದಿದ್ದಾರೆ. ಪ್ರಗತಿಪರ ಆಲೋಚನೆಗಳುಳ್ಳ ಹಾಗೂ ನೆಮ್ಮದಿಯ ನಾಳೆಯನ್ನು ಬಯಸುವ ಯಾವುದೇ ಪ್ರಜ್ಞಾವಂತ ವ್ಯಕ್ತಿಯೂ ಟ್ರಂಪ್ ಗೆಲುವನ್ನು ಆಶಿಸಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಟ್ರಂಪ್ ಸೋಲು ಜಗತ್ತಿಗೆ ಒಂದಷ್ಟು ನಿರಾಳ ತಂದಿದೆ. ಆದರೆ ಟ್ರಂಪ್‌ನ ಸೋಲಿನ ಸ್ವರೂಪ ಹಾಗೂ ಡೆಮಾಕ್ರಟ್ ಬೈಡನ್‌ಅವರ ಗೆಲುವಿನ ರೀತಿ ಹಾಗೂ ಅಜೆಂಡಾಗಳು ಈ ನಿರಾಳವನ್ನು ಕ್ಷಣಿಕಗೊಳಿಸಿದೆ. ಟ್ರಂಪ್ ಸೋತರೂ ಟ್ರಂಪಿಸಂ ಸೋತಿತೇ? ಈ ಚುನಾವಣೆ ಡೆಮಾಕ್ರಟರೊಳಗಿರುವ ರಿಪಬ್ಲಿಕನ್ನರನ್ನೂ ಹಾಗೂ ಬೈಡನ್ ಒಳಗಿರುವ ಟ್ರಂಪನ್ನು ನಿಜಕ್ಕೂ ಸೋಲಿಸಿತೇ ಎಂಬ ಆಳವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಿಜ್ಞಾಸೆಯು ಭಾರತವನ್ನು ಒಳಗೊಂಡಂತೆ ನವ ಉದಾರವಾದಿ ಕಾಲಘಟ್ಟದಲ್ಲಿ ಬಂಡವಾಳಶಾಹಿ ಒದಗಿಸಿರುವ ತೋರಿಕೆಯ ಪ್ರಜಾತಂತ್ರವನ್ನು ಅಪ್ಪಿಕೊಂಡಿರುವ ಎಲ್ಲಾ ಪ್ರಜಾತಂತ್ರಗಳು ಎದುರಿಸುತ್ತಿರುವ ದ್ವಂದ್ವವೇ ಆಗಿರುವುದರಿಂದ ಅಮೆರಿಕದ ಫಲಿತಾಂಶದ ಈ ದ್ವಂದ್ವಗಳಿಗೆ ಬಣ್ಣದ ಬಟ್ಟೆ ತೊಡಿಸದೆ ಚರ್ಚಿಸುವ ಅಗತ್ಯವಿದೆ. ವಾಸ್ತವವಾಗಿ, ಚುನಾವಣೆಯ ಮುನ್ನ ಡೆಮಾಕ್ರಟರು ಭಾವಿಸಿದಂತೆ ಅಮೆರಿಕದ ಜನ ರಿಪಬ್ಲಿಕನ್ನರನ್ನು ಸಾರಾ ಸಗಟು ತಿರಸ್ಕರಿಸಿ ಡೆಮಾಕ್ರಟರಿಗೆ ಬೆಂಬಲಿಸಿಲ್ಲ. ಹಾಗೆ ನೋಡಿದರೆ ಡೆಮಾಕ್ರಟರು ತಾಂತ್ರಿಕವಾಗಿ ಗೆದ್ದಿದ್ದರೂ ನೈತಿಕವಾಗಿ ಗೆದ್ದಿಲ್ಲ.

ಏಕೆಂದರೆ ಟ್ರಂಪ್‌ನ ಆರ್ಥಿಕ ನೀತಿಗಳು, ಕೋವಿಡ್ ನಿಭಾವಣೆ, ಕರಿಯರ ಮೇಲಿನ ದೌರ್ಜನ್ಯಗಳ ಬೆಂಬಲ, ವಲಸೆಕೋರ ಹಿಸ್ಪಾನಿಕರ ವಿರುದ್ಧದ ನೀತಿ, ಕಾರ್ಮಿಕ ವಿರೋಧಿ-ಪರಿಸರ ವಿರೋಧಿ ನೀತಿಗಳು, ವ್ಯಕ್ತಿಗತವಾಗಿ ಈವರೆಗಿನ ಯಾವ ಅಧ್ಯಕ್ಷರೂ ಪ್ರದರ್ಶಿಸದಷ್ಟು ಅತಿರೇಕದ ಹಾಗೂ ಕೀಳು ಅಭಿರುಚಿಯ ಬಿಳಿಯ ದುರಭಿಮಾನಿ ವರ್ತನೆಗಳಿಂದಾಗಿ ಬೈಡನ್ ಅವರ ಆಯ್ಕೆ ತುಂಬಾ ಸುಲಭವಾಗಿ ಹಾಗೂ ಆಪಾರ ಬಹುಮತದೊಂದಿಗೆ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು.ಆದರೆ ಹಾಗಾಗಲಿಲ್ಲ.

ಗೆದ್ದ ಗೆಲುವಲ್ಲ- ಸೋತ ಸೋಲಲ್ಲ

ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ, ಗೆದ್ದ ಡೆಮಾಕ್ರಟ್‌ಗಳ ಗೆಲುವಿನ ಅಂತರ ತುಂಬಾ ಕಡಿಮೆ ಇದೆ. ಹಾಗೆ ನೋಡಿದಲ್ಲಿ ಗೆದ್ದ ಡೆಮಾಕ್ರಟ್ ಬೈಡನ್ ಅವರೂ ಅಮೆರಿಕದ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 7.4 ಕೋಟಿ ಮತಗಳನ್ನು ಪಡೆದಿರುವುದು ಹೇಗೆ ಇತಿಹಾಸವೋ ಅದೇ ರೀತಿ ಸೋತ ಟ್ರಂಪ್ ಪಡೆದ 7ಕೋಟಿ ಮತಗಳೂ ಸಹ ಅಮೆರಿಕದ ಇತಿಹಾಸದಲ್ಲೇ ಸೋತ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬ ಪಡೆದ ಅತ್ಯಧಿಕ ಮತಗಳಾಗಿವೆ.

ಅಷ್ಟು ಮಾತ್ರವಲ್ಲ. 2016ರಲ್ಲಿ ಪಡೆದ ಮತಗಳಿಗಿಂತ 80 ಲಕ್ಷ ಹೆಚ್ಚು ಮತಗಳು ಟ್ರಂಪ್‌ಗೆ ದಕ್ಕಿದೆ. ಅಂದರೆ ಟ್ರಂಪ್‌ನ ನೀತಿಗಳನ್ನು ಅಥವಾ ಟ್ರಂಪಿಸಂನ್ನು ಮೊದಲಿಗಿಂತ ಹೆಚ್ಚು ಅಮೆರಿಕನ್ನರು ಬೆಂಬಲಿಸುತ್ತಿದ್ದಾರೆ ಎಂದಾಯಿತು. ಅಷ್ಟು ಮಾತ್ರವಲ್ಲ ಟ್ರಂಪ್ ಆಡಳಿತಾವಧಿಯಲ್ಲಿ ಆಫ್ರೋ-ಅಮೆರಿಕನ್ನರ ಮೇಲೆ ಬಿಳಿಯ ಭಯೋತ್ಪಾದಕರು ಹಾಗೂ ಪೊಲೀಸರು ನಿರಂತರವಾಗಿ ಹಲ್ಲೆಗಳನ್ನು ನಡೆಸಿದರು. ಫ್ಲಾಯ್ಡಾ ಎಂಬವರನ್ನು ಕೊಂದೇ ಹಾಕಿದರು. ಮೆಕ್ಸಿಕೋದಿಂದ ವಲಸೆ ಬರುವ ಬಡ ಹಿಸ್ಪಾನಿಕರನ್ನು ರೇಪಿಸ್ಟುಗಳೆಂದೂ, ಕಳ್ಳರೆಂದೂ ಬಣ್ಣಿಸಿದ್ದ ಟ್ರಂಪ್, ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ದೊಡ್ಡ ಗೋಡೆಯನ್ನು ಕಟ್ಟುವ ಸನ್ನಾಹವನ್ನು ನಡೆಸಿದ್ದರು. ಆದರೂ ಈ ಬಾರಿಯ ಚುನಾವಣೆಯಲ್ಲಿ 2016ಕ್ಕಿಂತ ಶೇ. 2ರಷ್ಟು ಹೆಚ್ಚು ಆಫ್ರೋ-ಅಮೆರಿಕನ್ನರು ಟ್ರಂಪ್‌ನ ಪರವಾಗಿ ವೋಟು ಹಾಕಿದ್ದಾರೆ. ಹಿಸ್ಪಾನಿಕರು ಹೆಚ್ಚಿರುವ ಟೆಕ್ಸಾಸ್ ಮತ್ತು ಫ್ಲೋರಿಡ ಪ್ರಾಂತಗಳಲ್ಲಿ ಹಿಸ್ಪಾನಿಕರು ಶೇ. 40-50ರಷ್ಟು ಹೆಚ್ಚುವರಿಯಾಗಿ ವೋಟು ಹಾಕಿದ್ದರಿಂದ ಅಲ್ಲಿ ರಿಪಬ್ಲಿಕನ್ ಪಕ್ಷ ಹಿಂದೆಂದಿಗಿಂತಲೂ ಭರ್ಜರಿ ವಿಜಯವನ್ನು ದಾಖಲಿಸಿದೆ. ಈ ಪ್ರದೇಶಗಳಲ್ಲಿ ಬೈಡನ್ ಮತ್ತವರ ಡೆಮಾಕ್ರಟಿಕ್ ಪಕ್ಷ ಅತ್ಯಂತ ದುರ್ಬಲ ಸಾಧನೆ ಮಾಡಿದೆ. ಹೀಗಾಗಿ ಟ್ರಂಪ್ ಸೋತರೂ ಟ್ರಂಪಿಸಂ ಅನುಮಾನ, ಅವಿಶ್ವಾಸಗಳಿಂದ ಅಮೆರಿಕವನ್ನು ಮೊದಲಿಗಿಂತ ಹೆಚ್ಚು ಧ್ರುವೀಕರಣಗೊಳಿಸಿದೆ.

ಡೆಮಾಕ್ರಟ್ ಅಧ್ಯಕ್ಷ- ರಿಪಬ್ಲಿಕನ್ ನೀತಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಜೊತೆಗೆ ಅಮೆರಿಕದ 100 ಸದಸ್ಯ ಬಲದ ಮೇಲ್ಮನೆಯಾದ ಸೆನೆಟ್ಟಿಗೂ ಹಾಗೂ 435 ಬಲದ ಹೌಸ್‌ಆಫ್ ಕಾಂಗ್ರೆಸ್‌ಗೂ ಚುನಾವಣೆಗಳು ನಡೆದಿವೆ. ಎರಡೂ ಕಡೆ ರಿಪಬ್ಲಿಕನ್ ಪಕ್ಷ 2016ಕ್ಕಿಂತ ಉತ್ತಮ ಸಾಧನೆಯನ್ನು ಮಾಡಿದೆ. ಈ ವರೆಗೆ ಬಂದಿರುವ ಫಲಿತಾಂಶಗಳ ಪ್ರಕಾರ ಅಧ್ಯಕ್ಷರ ಯಾವುದೇ ತೀರ್ಮಾನಗಳಿಗೆ, ಕ್ಯಾಬಿನೆಟ್ ರಚನೆಗೂ ಕೂಡಾ ಒಪ್ಪಿಗೆ ಕೊಡದೆ ಸತಾಯಿಸಬಹುದಾದ ಸೆನೆಟ್‌ನ ಚುನಾವಣೆಯಲ್ಲಿ ಡೆಮಾಕ್ರಟರು ಮತ್ತು ರಿಪಬ್ಲಿಕನ್ನರಿಬ್ಬರಿಗೂ ತಲಾ 48 ಸೀಟುಗಳು ಲಭ್ಯವಾಗಿವೆ. ಜನವರಿ 5ರಂದು ಜಾರ್ಜಿಯಾ ಪ್ರಾಂತದಲ್ಲಿ ಎರಡು ಸೆನೆಟ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಫಲಿತಾಂಶವು ಅಧ್ಯಕ್ಷ ಬೈಡನ್‌ಗೆ ಎಷ್ಟು ಸ್ವಾತಂತ್ರ್ಯವಿರಲಿದೆ ಎಂಬುದನ್ನು ನಿರ್ಧರಿಸಲಿದೆ. ಹಾಗೆಯೇ ಹೌಸ್ ಆಫ್ ಕಾಂಗ್ರೆಸ್‌ನಲ್ಲಿ ಬಹುಮತವಾದ 218ರ ಗಡಿರೇಖೆದಾಟಲು ಡೆಮಾಕ್ರಟರಿಗೆ ಇನ್ನು ಕೇವಲ ಮೂರು ಸ್ಥಾನಗಳು ಮಾತ್ರ ಅಗತ್ಯವಿದೆ. ಆದರೆ ಅದು 2016ಕ್ಕೆ ಹೋಲಿಸಿದಲ್ಲಿ 4 ಸ್ಥಾನಗಳನ್ನು ಕಳೆದುಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ 2016ಕ್ಕೆ ಹೋಲಿಸಿದಲ್ಲಿ 5 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ ಹಾಗೂ ಎಷ್ಟೇ ಪೂರಕ ವಾತಾವರಣವಿದ್ದರೂ ಡೆಮಾಕ್ರಟಿಕ್ ಪಕ್ಷ ರಿಪಬ್ಲಿಕನ್ ಪಕ್ಷದಿಂದ ಒಂದು ಸೀಟನ್ನೂ ಕಿತ್ತುಕೊಳ್ಳಲಾಗಿಲ್ಲ. ಪ್ರಾರಂಭಿಕ ಸರ್ವೇಗಳಲ್ಲಿ ವ್ಯಕ್ತವಾದಂತೆ ಶೇ. 48ರಷ್ಟು ಜನ ಟ್ರಂಪ್‌ಅಧಿಕಾರಕ್ಕೆ ಬಂದ ಮೇಲೆ ತಮ್ಮ ಜೀವನಮಟ್ಟ ಸುಧಾರಿಸಿದೆ ಎಂದು ಭಾವಿಸುತ್ತಾರೆ. ರಿಪಬ್ಲಿಕನ್ ಮತದಾರರಿಗೆ ಕೋವಿಡ್ ಬಿಕ್ಕಟ್ಟನ್ನು ಟ್ರಂಪ್ ನಿಭಾಯಿಸಿದ ರೀತಿ ಒಂದು ಕಳವಳದ ವಿಷಯವೇ ಆಗಿರಲಿಲ್ಲ.

ಟ್ರಂಪ್ ಸೋತರೂ ಟ್ರಂಪಿಸಂ ಸೋತಿಲ್ಲವೇಕೆ?
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಪ್ರದಾಯವಾದಿ ಕನ್ಸರ್ವೇಟಿವ್ ಪಕ್ಷವಾಗಿದ್ದ ರಿಪಬ್ಲಿಕನ್ ಪಕ್ಷವನ್ನು ಜನಾಂಗೀಯವಾದಿ ಫ್ಯಾಶಿಸ್ಟ್ ಪಕ್ಷವಾಗಿ ಪರಿವರ್ತಿಸಿದ ಟ್ರಂಪಿಸಂ ಅನ್ನು ನಿರ್ಣಾಯಕವಾಗಿ ಸೋಲಿಸುವಲ್ಲಿ ಡೆಮಾಕ್ರಟರು ಏಕೆ ವಿಫಲವಾದರು?
ಕಾರಣವಿಷ್ಟೆ. ಡೆಮಾಕ್ರಟರು ಮತ್ತು ರಿಪಬ್ಲಿಕನ್ನರ ನಡುವೆ ಅಮೆರಿಕದ ದಮನಿತ ಜನತೆಗೆ ಹೆಚ್ಚು ವ್ಯತ್ಯಾಸಗಳೇನೂ ಕಂಡು ಬರುತ್ತಿಲ್ಲ.
ದೇಶದೊಳಗೆ ಕಾರ್ಪೊರೇಟ್ ಶಕ್ತಿಗಳ ಪರವಾಗಿ ಕಾರ್ಮಿಕರ ಶೋಷಣೆ ಮಾಡುವಲ್ಲಿ, ಸಂಪತ್ತಿನ ಕೇಂದ್ರೀಕರಣ ಹೆಚ್ಚಿಸುವಲ್ಲಿ, ಕರಿಯರ ಮೇಲೆ ವ್ಯವಸ್ಥಿತ ತಾರತಮ್ಯ ಮಾಡುವಲ್ಲಿ, ಜಗತ್ತನ್ನು ತನ್ನಿಷ್ಟಕ್ಕೆ ತಕ್ಕಂತೆ ಮಣಿಸಲು ಮಿಲಿಟರಿ ಶಕ್ತಿಯನ್ನು ಬಳಸುವಲ್ಲಿ ರಿಪಬ್ಲಿಕನ್ನರು ಮತ್ತು ಡೆಮಾಕ್ರಟರುಗಳ ನಡುವೆ ಇರುವ ವ್ಯತ್ಯಾಸ ಕೇವಲ ಮಾತುಗಳಲ್ಲೇ ಹೊರತು ಕೃತಿಗಳಲ್ಲಲ್ಲ. ಉದಾಹರಣೆಗೆ ಎರಡನೇ ಮಹಾಯುದ್ಧದ ನಂತರ ಅಮೆರಿಕ ಜನತೆ ಹಾಗೂ ಕಾರ್ಪೊರೇಟ್ ಕಂಪೆನಿಗಳು 2008ರಲ್ಲಿ ಅತ್ಯಂತ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದವು. ಹಿನ್ನೆಲೆಯಲ್ಲೇ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ವಿಮೋಚನೆಯ ಆಶ್ವಾಸನೆಯನ್ನು ನೀಡಿದ ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮಾರನ್ನು ನಂಬಿ ಅಮೆರಿಕದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಆಫ್ರೋ-ಅಮೆರಿಕನ್ನನನ್ನು ಅಧ್ಯಕ್ಷರನ್ನಾಗಿ ಮಾಡಿದರು. ಮಾತ್ರವಲ್ಲ ಅವರನ್ನು ಎರಡನೇ ಬಾರಿಯೂ ಅಧ್ಯಕ್ಷರನ್ನಾಗಿ ಚುನಾಯಿಸಿದರು.

ಆದರೆ ಒಬಾಮ ಅವರ ಮಾತುಗಳು ಎಷ್ಟು ನ್ಯಾಯದ ಬಿಸಿಯಿಂದ ಕೂಡಿದ್ದರೂ ಕೃತಿಯಲ್ಲಿ ಮಾತ್ರ ಅಷ್ಟೇ ತಣ್ಣನೆ ಕ್ರೌರ್ಯದಿಂದ ಕೂಡಿದ ಆರ್ಥಿಕ ನೀತಿಗಳನ್ನೇ ಅವರ ನೇತೃತ್ವದ ಡೆಮಾಕ್ರಟ್ ಪಕ್ಷ ಅನುಸರಿಸಿತು. ಹೀಗಾಗಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಸಂಪತ್ತಿನ ಕೇಂದ್ರೀಕರಣ, ಆರ್ಥಿಕ ಅಸಮಾನತೆಗಳು ಉಂಟಾದದ್ದು ಒಬಾಮಾ ಅವಧಿಯಲ್ಲೇ. ಆದ್ದರಿಂದಲೇ ಅವರ ಎರಡನೇ ಅಧ್ಯಕ್ಷೀಯ ಅವಧಿಯನ್ನು ಕಾರ್ಪೊರೇಟ್ ಕಂಪೆನಿಗಳು ಉತ್ಸಾಹದಿಂದ ಬೆಂಬಲಿಸಿದರು. ಜಾಗತಿಕವಾಗಿಯೂ ಒಬಾಮಾ ಅವರು ಬುಷ್‌ಅವರ ಎಲ್ಲಾ ಸಾಮ್ರಾಜ್ಯಶಾಹಿ ನೀತಿಗಳನ್ನೂ ಹಾಗೂ ಬಿಳಿಯರ ಆಕ್ರಮಣಕಾರಿ ನೀತಿಗಳನ್ನು ಮುಂದುವರಿಸಿದರು.
ಆದ್ದರಿಂದ ರಿಪಬ್ಲಿಕನ್ನರಿಗೂ ಮತ್ತು ಡೆಮಾಕ್ರಟರಿಗೂ ವ್ಯತ್ಯಾಸವೇನಾದರೂ ಇದೆಯೇ ಎಂದು ಅರಿತುಕೊಳ್ಳಬೇಕೆಂದರೆ ಅಮೆರಿಕದ ಕರಿಯರನ್ನು ಕೇಳಬೇಕು, ಹಿಸ್ಪಾನಿಕರನ್ನು ಕೇಳಬೇಕು.. ಮಾಲ್ಕಮ್‌ಎಕ್ಸ್‌ಅನ್ನು ಕೇಳಬೇಕು, ಮಾರ್ಟಿನ್ ಲೂಥರ್‌ಕಿಂಗ್‌ಅನ್ನು ಕೇಳಬೇಕು..

ಅಮೆರಿಕದ ಲೂಟಿಗೆ ಗುರಿಯಾಗಿರುವ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಅರಬರನ್ನು, ಫೆಲೆಸ್ತೀನಿಯರನ್ನು, ಅಫ್ಘನ್ನರನ್ನು, ಏಶ್ಯ ದೇಶಗಳ ರೈತಾಪಿ ಮತ್ತು ಆದಿವಾಸಿಗಳನ್ನು ಕೇಳಬೇಕು.. ಆಫ್ರಿಕಾದ ರಾಷ್ಟ್ರೀಯವಾದಿ ಜನನಾಯಕ ಜೂಲಿಯಸ್ ನೈರೇರೆ ಹೇಳುವಂತೆ: ""The Unites States is also a one party state, but with a typical extravagance, they have two of them” (ಅಮೆರಿಕವು ಕೂಡಾ ಒಂದೇ ಪಕ್ಷದ ಆಡಳಿತವಿರುವ ಪ್ರಭುತ್ವವೇ. ಆದರೆ ಅಮೆರಿಕನ್ನರ ದುಂದು ಬದುಕಿಗೆ ತಕ್ಕಂತೆ ಎರಡಿವೆಯಷ್ಟೆ).
ಅಮೆರಿಕದ ತೇರಿಗೆ ರಿಪಬ್ಲಿಕನ್ನರದ್ದು ಒಂದು ಕಾಲು. ಡೆಮಾಕ್ರಟರದ್ದು ಒಂದು ಕಾಲು. ತೇರು ಮುಂದಕ್ಕೆ ಹೋಗಬೇಕೆಂದರೆ ಒಂದು ಕಾಲು ಮುಂದಿರಬೇಕು. ಆದ್ದರಿಂದಲೇ ಮತ್ತೊಂದು ಕಾಲು ಹಿಂದಕ್ಕಿರಬೇಕು ಅಷ್ಟೆ. ರಿಪಬ್ಲಿಕನ್ನರ ಸೋಲಿಗೂ ಡೆಮಾಕ್ರಟರ ಗೆಲುವಿಗೂ ಇರುವ ವ್ಯತ್ಯಾಸವೂ ಅಷ್ಟೆ.

ಪ್ರೋಗ್ರೆಸಿವ್ ಡೆಮಾಕ್ರಟರು ಸೋಲುತ್ತಾರೆ, ಮಾಡರೇಟರು ಗೆಲ್ಲುತ್ತಾರೆ
ವಾಸ್ತವದಲ್ಲಿ ಅಮೆರಿಕದ ಚುನಾವಣೆಗಳು ನಡೆಯುವ ಮುನ್ನ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದೊಳಗೆ ಯಾರು ಅಧ್ಯಕ್ಷೀಯ ಅಭ್ಯರ್ಥಿಯಾಗಬೇಕೆಂಬ ಪ್ರೈಮರಿ ಚುನಾವಣೆಗಳು ನಡೆಯುತ್ತವೆ. ಡೆಮಾಕ್ರಟಿಕ್ ಪಕ್ಷದೊಳಗೆ ಕಳೆದ ಮೂರು ಚುನಾವಣೆಗಳಿಂದ ಬಂಡವಾಳಶಾಹಿ ಹಾಗೂ ಜನಾಂಗೀಯವಾದಿ ನೀತಿಗಳಿಗೆ ಸಮಾಜವಾದಿ ಸ್ವರೂಪದ ಪರ್ಯಾಯಗಳನ್ನು ಮುಂದಿಡುತ್ತಾ ಬಂದಿರುವ ಬರ್ನಿ ಸ್ಯಾಂಡರ್ಸ್ ಅವರನ್ನು ಡೆಮಾಕ್ರಟಿಕ್‌ಪಕ್ಷ ಅದರ ಪ್ರೈಮರಿ ಗಳಲ್ಲಿ ಸೋಲಿಸುತ್ತಲೇ ಬಂದಿದೆ. ಡೆಮಾಕ್ರಟಿಕ್‌ಪಕ್ಷದೊಳಗೆ ಮಾಡರೇಟುಗಳು ಎಂದು ಕರೆಸಿಕೊಳ್ಳಲ್ಪಡುವ ಕಾರ್ಪೊರೇಟ್ ಭಟ್ಟಂಗಿಗಳಿಗೂ, ಪರ್ಯಾಯಕ್ಕೆ ತಳಮಟ್ಟದಲ್ಲಿ ಕೆಲಸ ಮಾಡುವ ಪ್ರೋಗ್ರೆಸಿವ್ ಮತ್ತು ಆ್ಯಕ್ಟಿವಿಸ್ಟುಗಳಿಗೂ ಸದಾ ಸಂಘರ್ಷ ನಡೆಯುತ್ತಲೇ ಇರುತ್ತದೆ ಮತ್ತು ಸದಾ ಸ್ಯಾಂಡರ್ಸ್ ಹಾಗೂ ಪ್ರೋಗ್ರೆಸಿವ್ ಬಣವನ್ನು ಕಾರ್ಪೊರೇಟ್‌ಗಳು ಸೋಲಿಸುತ್ತಾರೆ. ಹೀಗೆ ಡೆಮಾಕ್ರಟ್‌ಗಳ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ಅಂತಿಮಗೊಳ್ಳುವ ಪ್ರಕ್ರಿಯೆಯಲ್ಲೇ ರಿಪಬ್ಲಿಕನ್ನರ ತದ್ರೂಪಿ ಹುಟ್ಟಿಕೊಂಡಿರುತ್ತಾನೆ/ಳೆ.

 ಈ ಬಾರಿಯೂ ಸ್ಯಾಂಡರ್ಸ್ ಅವರು ಕನಿಷ್ಠ ಕೂಲಿ ಹೆಚ್ಚಿಸುವ, ಸರ್ವರಿಗೂ ಉಚಿತ ಆರೋಗ್ಯ ರಕ್ಷಣೆ ಒದಗಿಸುವ, ಅದಕ್ಕಾಗಿ ಕಾರ್ಪೊರೇಟ್ ಉದ್ದಿಮೆಪತಿಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ, ಇನ್ನಿತರ ಹಲವಾರು ಸಮಾಜಮುಖಿ ಅಜೆಂಡಾಗಳನ್ನು ಮುಂದಿಟ್ಟಿದ್ದರು. ಅದೇ ಅಜೆಂಡಾಗಳನ್ನು ಅವರು ರಿಪಬ್ಲಿಕನ್ ಪಕ್ಷದ ಪರವಾಗಿದ್ದ ಬಿಳಿಯ ಕಾರ್ಮಿಕರ ಮಧ್ಯ ಪ್ರಚಾರ ಮಾಡಿ ಬೆಂಬಲ ಗಳಿಸಿದ್ದರು. ಆದರೆ ಡೆಮಾಕ್ರಟಿಕ್ ಪಕ್ಷದೊಳಗಿನ ‘ಮಾಡರೇಟುಗಳು’ ಅವರನ್ನು ಸೋಲಿಸಿದರು. ಆ ನಂತರವೇ ಕಾರ್ಪೊರೇಟ್ ಧಣಿಗಳು ಡೆಮಾಕ್ರಟಿಕ್ ಪಕ್ಷಕ್ಕೆ ನಿಧಿ ಒದಗಿಸಲು ಪ್ರಾರಂಭಿಸಿದರು.

ಈ ಬಾರಿ ಟ್ರಂಪ್ ಅವರ ಕೆಲವು ತಿಕ್ಕಲು ನೀತಿಗಳು ಮತ್ತು ವರ್ತನೆಗಳು ಕಾರ್ಪೊರೇಟ್ ಕುಲದ ವ್ಯವಸ್ಥಿತ ನಿರ್ವಹಣೆಗೂ ಅಡ್ಡಿಯಾಗಿದ್ದರಿಂದ ಅಮೆರಿಕದ ಕಾರ್ಪೊರೇಟ್ ಕುಬೇರರು ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಡೆಮಾಕ್ರಟರ ಬೆಂಬಲಕ್ಕೆ ನಿಲ್ಲಲು ಸಿದ್ಧವಿದ್ದರು. ಆದರೆ ತಮ್ಮ ಆಸಕ್ತಿಗಳಿಗೆ ಕಡುನಿಷ್ಠೆ ತೋರಬಲ್ಲ ಉಮೇದುವಾರ ಬೇಕಿತ್ತಷ್ಟೆ. ಅದನ್ನು ಡೆಮಾಕ್ರಟಿಕ್ ಪಕ್ಷ ಬೈಡನ್ ರೂಪದಲ್ಲಿ ಒದಗಿಸಿತು.

ಬೈಡನ್ ಒಳಗಿನ ಟ್ರಂಪ್:
ಬೈಡನ್ ಅವರು ಡೆಮಾಕ್ರಟಿಕ್ ಪಕ್ಷದ ಅತ್ಯಂತ ಹಿರಿಯ ಸದಸ್ಯರು ಮಾತ್ರವಲ್ಲ ಅಮೆರಿಕದ ಅತ್ಯಂತ ಹಿರಿಯ ಹಾಗೂ ನುರಿತ ರಾಜಕಾರಣಿಯಾದ ಅಧ್ಯಕ್ಷರೂ ಆಗಲಿದ್ದಾರೆ. 1970ರ ದಶಕದಲ್ಲಿ ಡೆಮಾಕ್ರಟಿಕ್ ಪಕ್ಷದ ಮೂಲಕ ರಾಜಕಾರಣಕ್ಕೆ ಕಾಲಿಟ್ಟ ಬೈಡನ್ 35 ವರ್ಷಗಳ ಕಾಲ ಸೆನೆಟರ್ ಆಗಿಯೂ ಒಬಾಮಾ ಅವರ ಅಧ್ಯಕ್ಷ ಅವಧಿಯಲ್ಲಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 

ಆದರೆ ಬೈಡನ್ ಎಷ್ಟು ಡೆಮಾಕ್ರಟ್? ಎಷ್ಟು ಉದಾರವಾದಿ? 
1960-70ರ ದಶಕದಲ್ಲಿ ಅಮೆರಿಕದಲ್ಲಿ ಕರಿಯರ ಮೇಲೆ ಬಿಳಿಯರು ನಡೆಸುತ್ತಿದ್ದ ತಾರತಮ್ಯಗಳ ವಿರುದ್ಧ ಕರಿಯರ ಆಕ್ರೋಶ ಹಾಗೂ ಹೋರಾಟಗಳು ಭುಗಿಲೆದ್ದಿದ್ದವು. ಆ ಹೋರಾಟಗಳ ಫಲಿತವಾಗಿ ಆವರೆಗೆ ಕರಿಯರಿಗೆಂದೇ ಪ್ರತ್ಯೇಕವಾಗಿದ್ದ ಶಾಲೆಗಳ ಬದಲಾಗಿ ಕರಿಯರೂ ಬಿಳಿಯರಿಗೆ ಸೀಮಿತವಾಗಿದ್ದ ಶಾಲೆಗೆ ಹೋಗುವ ಡಿಸೆಗ್ರಿಗೇಷನ್ ಬಸ್ಸಿಂಗ್ ವ್ಯವಸ್ಥೆ ನಿಧಾನವಾಗಿ ಜಾರಿಯಾಗುತ್ತಿತ್ತು. ಆದರೆ ಅದರ ವಿರುದ್ಧ ಬಿಳಿಯರು ದೊಡ್ಡ ಮಟ್ಟದಲ್ಲಿ ತಮ್ಮ ಪ್ರತಿರೋಧವನ್ನು ತೋರಲಾರಂಭಿಸಿದರು. ಆಗ ಡೆಲ್ವರ್ ಪ್ರಾಂತದಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಗೆ ನಿಂತಿದ್ದ ಬೈಡನ್ ಅವರು ಈ ಬಸ್ಸಿಂಗ್ ವ್ಯವಸ್ಥೆಯನ್ನು ಖಂಡಿಸಿ ಬಿಳಿಯರ ಪರವಾಗಿ ನಿಂತು ಮತ ಕೇಳಿದ್ದರು.

ಜೊತೆಗೆ ಆಗ ಸ್ಥಳೀಯ ‘ಪೀಪಲ್ಸ್ ಪೇಪರ್’ ಎಂಬ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ: ‘‘ಬಿಳಿಯರು ಕರಿಯರನ್ನು ಕಳೆದ ಮುನ್ನೂರು ವರ್ಷಗಳಿಂದ ಶೋಷಣೆ ಮಾಡುತ್ತಾ ಬಂದಿದ್ದರಿಂದ ಕರಿಯರು ಬಿಳಿಯರಿಗಿಂತ ಹಿಂದೆ ಬಿದ್ದಿದ್ದಾರೆ. ಆದ್ದರಿಂದ ಈಗ ಕರಿಯರಿಗೆ ಬಿಳಿಯರಿಗಿಂತ ಹೆಚ್ಚು ಪ್ರಾಶಸ್ತ್ಯ ಕೊಡಬೇಕು -ಎಂಬ 60ರ ದಶಕದಲ್ಲಿ ಚಾಲ್ತಿಯಲ್ಲಿದ್ದ ವಾದವನ್ನು ನಾನು ಬಿಲ್ಕುಲ್ ಒಪ್ಪುವುದಿಲ್ಲ’’ ಎಂದು ಸ್ಪಷ್ಟವಾಗಿ ಘೋಷಿಸಿದ್ದರು.

1980ರ ದಶಕದಲ್ಲಿ ಗಲ್ಲು ಶಿಕ್ಷೆಯ ಪರವಾದ ಕಾನೂನು ರಚನೆಯಲ್ಲಿ, ಅಮೆರಿಕದ ಸೆರೆಮನೆಯಲ್ಲಿ ಪೆರೋಲ್ ನೀಡುವ ನಿಯಮಗಳನ್ನು ಬಿಗಿಗೊಳಿಸುವ, ಸಾಮಾನ್ಯವಾಗಿ ಕರಿಯರು ಬಳಸುವ ಅಗ್ಗದ ಅಮಲಿನ ಪದಾರ್ಥದ ಬಳಕೆಗೆ ಹೆಚ್ಚಿನ ಶಿಕ್ಷೆಯನ್ನೂ, ಬಿಳಿಯ ಮಧ್ಯಮ ವರ್ಗ ಬಳಸುತ್ತಿದ್ದ ಅಮಲು ಪದಾರ್ಥವಾದ ಕೊಕೈನ್ ಬಳಕೆಗೆ ಕಡಿಮೆ ಶಿಕ್ಷೆಯನ್ನು ವಿಧಿಸುವ ಕಾನೂನುಗಳನ್ನು ರಚಿಸಿದ್ದು ಬೈಡನ್ ಅವರೇ. 1990ರ ದಶಕದಲ್ಲಿ ಕರಿಯರ ಮತ್ತು ವಲಸೆ ಬಂದ ಹಿಸ್ಪಾನಿಕರ ಹೋರಾಟಗಳು ಹೆಚ್ಚುತ್ತಿದ್ದಂತೆ ಅವರ ಅಸ್ತಿತ್ವವನ್ನೇ ಅಪರಾಧೀಕರಿಸುವ ‘ಕ್ರೈಮ್ ಬಿಲ್’ ಅನ್ನು ರೂಪಿಸಿದ ಕೀರ್ತಿಯೂ ಬೈಡನ್ ಅವರದ್ದೇ. ಆಗ ಅವರು ಆ ಬಿಲ್ಲನ್ನು ಸಮರ್ಥಿಸಿಕೊಳ್ಳುತ್ತಾ: ‘‘ಒಬ್ಬ ವ್ಯಕ್ತಿ ಸಮಾಜದಲ್ಲಿ ಏಕೆ ಅಪರಾಧ ಮಾಡುತ್ತಾನೆ ಎಂಬುದು ನನಗೆ ಸಂಬಂಧಿಸದ ವಿಷಯ. ಒಬ್ಬ ವ್ಯಕ್ತಿ ಏಕೆ ಸಮಾಜ ವಿರೋಧಿಯಾಗುತ್ತಾನೆಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳನ್ನು ಸಮಾಜದಲ್ಲಿ ಅಡ್ಡಾಡಲು ಬಿಡದೆ ಹಿಡಿದಿಡಿದು ಸೆರೆಮನೆಗೆ ದೂಡಬೇಕು. ಆಗ ಮಾತ್ರ ನಮ್ಮ ದೇಶದ ಬೀದಿಗಳು ಸುರಕ್ಷಿತವಾಗಿರುತ್ತವೆ’’ ಎಂದು ಸೆನೆಟ್‌ನ ಎಲ್ಲಾ ಸದಸ್ಯರ ಬೆಂಬಲ ಕೋರಿದ್ದರು.

ಹಾಗೆ ನೋಡಿದರೆ, ರಿಪಬ್ಲಿಕನ್ನರ ಕಾಲವಾಗಿರಲಿ, ಡೆಮಾಕ್ರಟರ ಕಾಲವಾಗಿರಲಿ, ಈ ಅವಧಿಯಲ್ಲಿ ಜಾರಿಗೆ ಬಂದ ಎಲ್ಲಾ ಜನವಿರೋಧಿ, ದಮನಕಾರಿ ಕಾನೂನುಗಳ ರಚನೆಯಲ್ಲೂ ಸೆನೆಟರ್ ಬೈಡನ್‌ರ ಸಕ್ರಿಯ ಪಾತ್ರವಿಲ್ಲದೆ ಜಾರಿಗೆ ಬರಲು ಸಾಧ್ಯವಿರಲಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ನಂತರ 2000-03ರಲ್ಲಿ ಇರಾಕ್ ಮೇಲಿನ ಯುದ್ಧಕ್ಕೆ ಬೇಕಾಗಿದ್ದ ಸಮೂಹ ನಾಶ ಶಸ್ತ್ರಾಸ್ತ್ರಗಳ ನಾಶವೆಂಬ ಶತಮಾನದ ಸುಳ್ಳನ್ನೂ ಹೆಣೆದ ಎರಡೂ ಪಕ್ಷಗಳ ಗುಂಪಿನ ನಾಯಕರಾಗಿದ್ದು ಬೈಡನ್ ಅವರೇ. ನಂತರದ ಸಿರಿಯಾ, ಯೆಮನ್ ಇನ್ನಿತರ ಎಲ್ಲಾ ದೇಶಗಳಲ್ಲಿನ ಮಿಲಿಟರಿ ಮಧ್ಯಪ್ರವೇಶಕ್ಕೆ ಸರಕಾರಗಳಿಗೆ ಬೇಕಾದ ಸೆನೆಟ್ ಬೆಂಬಲವನ್ನು ದೊರಕಿಸಿಕೊಡುವುದರಲ್ಲಿ ಅಮೆರಿಕನ್ ಸಾಮ್ರಾಜ್ಯದ ನಿಷ್ಠಾವಂತ ಸೇನಾಧಿಪತಿಯಾಗಿ ಬೈಡನ್ ತಮ್ಮ ಪರಿಣಿತಿ ತೋರಿದ್ದಾರೆ. ಹಾಗೆಯೇ ಇಸ್ರೇಲಿನ ಫ್ಯಾಶಿಸ್ಟ್ ಜಿಯೋನಿಸ್ಟ್ ಆಡಳಿತದ ಉದ್ದಕ್ಕೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಹಾಲಿ ಚುನಾವಣೆಯ ಪ್ರಚಾರದಲ್ಲಿ:

‘‘ಅಮೆರಿಕದ ಜನರು ಕಷ್ಟದಲ್ಲಿರುವುದಕ್ಕೆ ಈ ದೇಶದ 500 ಶತಕೋಟ್ಯಧಿಪತಿಗಳು ಖಂಡಿತ ಕಾರಣರಲ್ಲ. ಅವರು ಖಂಡಿತ ಕೆಟ್ಟವರಲ್ಲ. ಶ್ರೀಮಂತರು ಬಡವರಷ್ಟೇ ದೇಶಭಕ್ತರಾಗಿದ್ದಾರೆ’’ (5&9&2018, Brookings Institution ಉದ್ದೇಶಿಸಿ ಮಾಡಿದ ಭಾಷಣ) ಎಂದು ಕಾರ್ಪೊರೇಟ್‌ಗಳಿಗೆ ಭರವಸೆ ಕೊಟ್ಟ ಬೈಡನ್ ಅವರು ಒಂದು ವೇಳೆ ಯಾವುದೇ ಸರಕಾರ ಸಾರ್ವಜನಿಕ ಆರೋಗ್ಯ ಯೋಜನೆಗಾಗಿ ಕಾರ್ಪೊರೇಟ್‌ಗಳ ಮೇಲೆ ತೆರಿಗೆ ವಿಧಿಸಿದರೆ ತಾವು ಅದನ್ನು ವೀಟೋ ಮಾಡಿಬಿಡುವುದಾಗಿಯೂ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದರು.

ಇದು ಡೆಮಾಕ್ರಟ್ ಬೈಡನ್. ಇವರಿಗೂ ಟ್ರಂಪ್‌ಗೂ ವ್ಯತ್ಯಾಸವೇನೆಂದು ಬಲ್ಲವರು ಹೇಳಬೇಕು. ಆದ್ದರಿಂದಲೇ ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷಕ್ಕೆ ಬರಬೇಕಿದ್ದ ಕರಿಯರ ಹಾಗೂ ಹಿಸ್ಪಾನಿಕರ ವೋಟುಗಳಲ್ಲಿ ಈ ಬಾರಿ ಗಣನೀಯವಾಗಿ ಕಡಿತವಾಗಿದೆ. ಸಹಜವಾಗಿಯೇ ಜನ ಬೈಡನ್ ಆಡಳಿತವನ್ನು ಧಿಕ್ಕರಿಸುತ್ತಾರೆ. 2024ರ ಚುನಾವಣೆಯಲ್ಲಿ ಪರಿಚಿತ ಅಪಾಯಕಾರಿಯಾದ ರಿಪಬ್ಲಿಕನ್ನರನ್ನು ಗೆಲ್ಲಿಸುತ್ತಾರೆ. ಇಂತಹ ‘ರಿಪಬ್ಲಿಕನ್-ಡೆಮಾಕ್ರಟ್’ ಜುಗಲ್ಬಂದಿಗಳಿಂದ ಹತಾಷೆಗೊಳ್ಳುವ ಅವಧಿಯು ಇದಕ್ಕಿಂತ ಭಿನ್ನವಾಗಿ ಕಾಣುವ ನಿಜವಾದ ಅಥವಾ ಹುಸಿಯಾದ ಯಾವುದೇ ವಿಭಿನ್ನತೆಯನ್ನು ಅಥವಾ ಟ್ರಂಪ್‌ನಂತಹವರ ತಿಕ್ಕಲುತನಗಳನ್ನು ಜನ ಪರಿಹಾರವೆಂದು ಭಾವಿಸು

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News