ಇಸ್ಲಾಮ್ ಬಗ್ಗೆ ಅಪಾರ ಗೌರವ: ಈಜಿಪ್ಟ್ ಭೇಟಿಯ ವೇಳೆ ಫ್ರಾನ್ಸ್ ವಿದೇಶ ಸಚಿವರ ಹೇಳಿಕೆ

Update: 2020-11-11 15:11 GMT
 ಫೋಟೊ ಕೃಪೆ :twitter.com

ಕೈರೋ (ಈಜಿಪ್ಟ್), ನ. 11: ನನ್ನ ದೇಶಕ್ಕೆ ಇಸ್ಲಾಮ್ ಬಗ್ಗೆ ಅಪಾರವಾದ ಗೌರವವಿದೆ ಎಂದು ಫ್ರಾನ್ಸ್ ವಿದೇಶ ಸಚಿವ ಜೀನ್ ಯವೆಸ್ ಲಿ ಡ್ರಿಯಾನ್ ಈಜಿಪ್ಟ್‌ಗೆ ನೀಡಿದ ಭೇಟಿಯ ವೇಳೆ ಹೇಳಿದ್ದಾರೆ.

 ಪ್ರವಾದಿ ಮುಹಮ್ಮದರ ವ್ಯಂಗ್ಯಚಿತ್ರಗಳ ಪ್ರಕಟನೆಯನ್ನು ಫ್ರಾನ್ಸ್ ಬೆಂಬಲಿಸಿದ ಬಳಿಕ ಮುಸ್ಲಿಮ್ ಜಗತ್ತಿನಲ್ಲಿ ಎದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ ಹಾಗೂ ಅದರ ಫಲವಾಗಿ ಮುಸ್ಲಿಮ್ ಜಗತ್ತಿನಲ್ಲಿ ‘ಫ್ರಾನ್ಸ್ ವಿರೋಧಿ’ ಅಭಿಯಾನ ನಡೆಯುತ್ತಿದೆ ಎಂದು ಫ್ರಾನ್ಸ್ ವಿದೇಶ ಸಚಿವರು ಹೇಳಿದರು. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾ ಅಲ್-ಸಿಸಿ ಮತ್ತು ವಿದೇಶ ಸಚಿವ ಸಾಮಿಶ್ ಶುಕ್ರಿಯನ್ನು ಭೇಟಿಯಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ನಮಗೆ ಇಸ್ಲಾಮ್ ಬಗ್ಗೆ ಅಪಾರವಾದ ಗೌರವವಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಲಿ ಡ್ರಿಯಾನ್ ಹೇಳಿದರು. ‘‘ಫ್ರಾನ್ಸ್‌ನಲ್ಲಿ ಮುಸ್ಲಿಮರು ಸಮಾಜದ ಸಂಪೂರ್ಣ ಭಾಗವಾಗಿದ್ದಾರೆ ಎನ್ನುವುದನ್ನೂ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’’ ಎಂದರು.

‘‘ಅದೇ ವೇಳೆ, ನಾವು ನಮ್ಮ ದೇಶದಲ್ಲಿ ಮತ್ತು ಇತರೆಡೆಗಳಲ್ಲಿ ಭಯೋತ್ಪಾದನೆ ಮತ್ತು ತೀವ್ರವಾದದ ಬೆದರಿಕೆಯನ್ನು ಎದುರಿಸುತ್ತಿದ್ದೇವೆ. ಆದರೆ ಇದು ಜಗತ್ತಿನಾದ್ಯಂತ ಕಂಡುಬರುತ್ತಿರುವ ಸಾಮಾನ್ಯ ಬೆದರಿಕೆಯಾಗಿದೆ’’ ಎಂದು ಲಿ ಡ್ರಿಯಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News