ಗೆದ್ದು ಸೋತ ನಿತೀಶ್, ಸೋತು ಗೆದ್ದ ತೇಜಸ್ವಿ!

Update: 2020-11-12 05:29 GMT

ಅಡ್ವಾಣಿಯ ರಥಯಾತ್ರೆ ದೇಶಾದ್ಯಂತ ದ್ವೇಷದ ಬೀಜಗಳನ್ನು ಹರಡುತ್ತಾ ಓಡಾಡುತ್ತಿರುವಾಗ, ಆ ರಥವನ್ನು ಕಟ್ಟಿ ಹಾಕಿ ಕೋಮುವಾದಕ್ಕೆ ಗಟ್ಟಿ ಧ್ವನಿಯಲ್ಲಿ ಉತ್ತರಿಸಿದ್ದ ಬಿಹಾರ, ಇದೀಗ ಅಕ್ಷರಶಃ ಬಿಜೆಪಿಯ ಕೈಯಲ್ಲಿದೆ. ಬಿಹಾರವನ್ನು ಕೋಮುದ್ವೇಷದಿಂದ ರಕ್ಷಿಸಿದ ಲಾಲು ಪ್ರಸಾದ್ ಇದೀಗ ಜೈಲಿನಲ್ಲಿದ್ದಾರೆ. ಅಡ್ವಾಣಿ ವಿಫಲವಾದುದನ್ನು ಮೋದಿಯವರು, ಸಮಾಜವಾದಿ ನಾಯಕರನ್ನೇ ಬಳಸಿಕೊಂಡು ಸಾಧಿಸಿಕೊಂಡಿದ್ದಾರೆ. ಎನ್‌ಡಿಎಯ ಹೆಸರಿನಲ್ಲಿ ಬಿಹಾರವನ್ನು ಬಿಜೆಪಿ ಗೆದ್ದಿದೆ. ನಿತೀಶ್ ಪಕ್ಷ ವೈಯಕ್ತಿಕವಾಗಿ ಈ ಚುನಾವಣೆಯಲ್ಲಿ ಸೋತಿದೆ.

ಇದೇ ಸಂದರ್ಭದಲ್ಲಿ ನಿತೀಶ್‌ಗೆ ಹೋಲಿಸಿದರೆ ವಯಸ್ಸಿನಲ್ಲಿ ಅತಿ ಕಿರಿಯರಾಗಿರುವ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಅತಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 144 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಆರ್‌ಜೆಡಿ 75 ಸ್ಥಾನಗಳನ್ನು ಪಡೆದುಕೊಂಡಿದ್ದರೆ, 115 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಜೆಡಿಯು ತನ್ನದಾಗಿಸಿಕೊಂಡಿರುವುದು ಕೇವಲ 43 ಸ್ಥಾನಗಳನ್ನು. ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. 2015ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಯು ಬಲ ಈ ಚುನಾವಣೆಯಲ್ಲಿ 43 ಸ್ಥಾನಗಳಿಗೆ ಕುಸಿದಿದ್ದರೆ, ಆಗ 53 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ ತನ್ನ ಗಳಿಕೆಯನ್ನು 74ಕ್ಕೆ ಹೆಚ್ಚಿಸಿಕೊಂಡಿದೆ. ಪ್ರಾದೇಶಿಕ ಪಕ್ಷಗಳ ಕೈಯಲ್ಲಿದ್ದ ಬಿಹಾರವನ್ನು ನಿತೀಶ್ ಮೂಲಕ ಬಿಜೆಪಿ ಗೆದ್ದಿದೆಯಾದರೂ, ಬಿಹಾರ ಆಂತರಿಕವಾಗಿ ತೇಜಸ್ವಿಯನ್ನು ಭವಿಷ್ಯದ ತನ್ನ ನಾಯಕನಾಗಿ ಒಪ್ಪಿಕೊಂಡಿದೆ.

ಬಿಜೆಪಿ ಈಗಾಗಲೇ ಎನ್‌ಡಿಎ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ಘೋಷಿಸಿದೆ. ದುರಂತವೆಂದರೆ, ಅವರು ಬಿಜೆಪಿಯ ಪ್ರತಿನಿಧಿಯಾಗಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು, ಬಿಹಾರದ ಜನತೆ ಅವರನ್ನು ಭಾಗಶಃ ತಿರಸ್ಕರಿಸಿದ್ದಾರೆ.ಲಾಲು ಪ್ರಸಾದ್ ಅನುಪಸ್ಥಿತಿಯಲ್ಲಿ ತೇಜಸ್ವಿ ತನ್ನ ಪಕ್ಷವನ್ನು ಸಂಘಟಿಸಿ 75 ಸ್ಥಾನಗಳನ್ನು ಗೆಲ್ಲುವುದು ಬಿಹಾರದ ಪಾಲಿಗೆ ದೊಡ್ಡ ಬೆಳವಣಿಗೆಯಾಗಿದೆ. ನಿತೀಶ್, ಲಾಲುಪ್ರಸಾದ್‌ರಂತಹ ಹಿರಿಯರ ಯುಗ ಮುಗಿದು ಅಲ್ಲಿ ತೇಜಸ್ವಿಯಂತಹ ಯುವ ನಾಯಕರ ಯುಗವೊಂದನ್ನು ತೆರೆದುಕೊಳ್ಳುತ್ತಿರುವ ಸೂಚನೆಯನ್ನು ಬಿಹಾರ ಚುನಾವಣಾ ಫಲಿತಾಂಶ ನೀಡಿದೆ. ಕೊರೋನ, ಲಾಕ್‌ಡೌನ್‌ನಂತಹ ಕರಾಳ ದಿನಗಳ ಬಳಿಕ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ ಬಿಹಾರ ವಿಧಾನಸಭೆಯ ಫಲಿತಾಂಶದ ಕುರಿತಂತೆ ಪ್ರಜ್ಞಾವಂತರಿಗೆ ಭಾರೀ ನಿರೀಕ್ಷೆಗಳಿದ್ದವು. ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಬಿಹಾರ, ಲಾಕ್‌ಡೌನ್‌ನಿಂದಾಗಿ ಭಾರೀ ನಾಶ, ನಷ್ಟಕ್ಕೀಡಾಗಿತ್ತು. ಕೊರೋನವನ್ನು ಎದುರಿಸುವಲ್ಲಿ ವಿಫಲವಾದ ಸರಕಾರ, ಲಾಕ್‌ಡೌನ್ ಮೂಲಕ ಬಡವರ ಬದುಕನ್ನು ಬಾಣಲೆಯಿಂದ ಎತ್ತಿ ನೇರವಾಗಿ ಬೆಂಕಿಗೆ ಹಾಕಿತ್ತು. ಜೊತೆಗೆ ಕೇಂದ್ರ ಸರಕಾರದ ಹಲವು ಜನವಿರೋಧಿ ನೀತಿಗಳು ಬಿಹಾರದ ಜನಸಾಮಾನ್ಯರ ಬದುಕಿನ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರಿದ್ದವು. ಇಂತಹ ಸಂದರ್ಭದಲ್ಲಿ ಆಡಳಿತ ವಿರೋಧಿ ಫಲಿತಾಂಶ ಹೊರಬೀಳುವುದು ಅತಿ ಸಹಜವಾದ ಬೆಳವಣಿಗೆ. ಆದರೆ ಬಿಹಾರದಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅಷ್ಟೇ ಅಲ್ಲ, ಜೆಡಿಯುನಂತಹ ಪ್ರಾದೇಶಿಕತೆಯ ಬೇರುಳ್ಳ ಪಕ್ಷವನ್ನು ಅದು ಭಾಗಶಃ ತಿಂದು ಹಾಕಿದೆ.

ಲಾಕ್‌ಡೌನ್‌ನಂತಹ ಕರಾಳ ದಿನಗಳ ನೆನಪು ಇನ್ನೂ ಆರದ ಗಾಯದಂತೆ ಉಳಿದುಕೊಂಡಿರುವ ಹೊತ್ತಿನಲ್ಲಿ ಬಿಜೆಪಿ ಬಿಹಾರದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿರುವುದು ‘ಅಭಿವೃದ್ಧಿಯ ರಾಜಕಾರಣ’ಕ್ಕಾಗಿರುವ ಸೋಲೇ ಸರಿ. ಒಂದು ರೀತಿಯಲ್ಲಿ, ಈ ಚುನಾವಣೆ ಲಾಕ್‌ಡೌನ್ ನಾಶ, ನಷ್ಟಗಳಿಂದ ಮೋದಿಗೆ ಪ್ರಾಥಮಿಕವಾಗಿ ಸಣ್ಣ ಕ್ಲೀನ್ ಚಿಟ್ ನೀಡಿದಂತಾಗಿದೆ. ಅಧಿಕಾರದ ದುರುಪಯೋಗ, ಮಾಧ್ಯಮಗಳ ದುರ್ಬಳಕೆ, ಹಣದ ಬಲ, ಮೋದಿಯವರ ಸುಳ್ಳುಗಳು ಈ ಚುನಾವಣೆಯಲ್ಲಿ ಯಥೇಚ್ಛವಾಗಿ ಬಳಕೆಯಾಗಿದೆಯಾದರೂ ಅದು ಪೂರ್ಣವಾಗಿ ಫಲಕೊಟ್ಟಿಲ್ಲ. ಆದರೂ ಬಿಜೆಪಿಯನ್ನು ಬಲಾಢ್ಯ ಪಕ್ಷವಾಗಿ ಬೆಳೆಸುವ ಮೂಲಕ ನಿತೀಶ್ ಕುಮಾರ್ ಮತ್ತು ದಲಿತ ಯುವ ನಾಯಕ ಚಿರಾಗ್ ಪಾಸ್ವಾನ್ ‘ಲಾಕ್‌ಡೌನ್ ಸಂತ್ರಸ್ತ’ರಿಗೆ ವಿಧಾನಸಭಾ ಚುನಾವಣೆಯಲ್ಲಿ ಭಾರೀ ದ್ರೋಹವೆಸಗಿದ್ದಾರೆ. ಈ ಬಾರಿಯ ಚುನಾವಣೆಯ ಫಲಿತಾಂಶದಲ್ಲಿ ಅಸದುದ್ದೀನ್ ಉವೈಸಿ ಮತ್ತು ಚಿರಾಗ್ ಪಾಸ್ವಾನ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿವೆೆ.

ಈ ದೇಶದಲ್ಲಿ ಸದ್ಯ ಅತಂತ್ರವಾಗಿರುವ, ಅತಿ ಹೆಚ್ಚು ನೋವುಗಳನ್ನು ಉಣ್ಣುತ್ತಿರುವ ಎರಡು ಸಮುದಾಯಗಳ ನಾಯಕರೆಂದು ಸ್ವಯಂ ಘೋಷಿಸಿಕೊಂಡಿರುವ ಈ ಇಬ್ಬರು ನಾಯಕರಲ್ಲಿ ರಾಮ್‌ವಿಲಾಸ್ ಪಾಸ್ವಾನ್‌ನ ಪುತ್ರ ಚಿರಾಗ್ ಪಾಸ್ವಾನ್‌ರಂತೂ ‘‘ಬಿಜೆಪಿಯನ್ನು ಬಲಿಷ್ಠಗೊಳಿಸುವುದಕ್ಕಾಗಿ ನಾನು ಜೆಡಿಯು ವಿರುದ್ಧ ಸ್ಪರ್ಧಿಸಿದೆ’’ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿಯನ್ನು ಬಲಿಷ್ಠಗೊಳಿಸುವುದರಿಂದ ಚಿರಾಗ್ ಪಾಸ್ವಾನ್‌ರ ರಾಜಕೀಯಕ್ಕೆ ಯಾವ ರೀತಿ ಸಹಾಯವಾಗುತ್ತದೆ, ದಲಿತ ಸಮುದಾಯಕ್ಕೆ ಅದರಿಂದ ಲಾಭವೇನು? ಎನ್ನುವ ಪ್ರಶ್ನೆಗೆ ಸ್ವತಃ ಅವರಲ್ಲೂ ಉತ್ತರವಿರಲಾರದು. ಚುನಾವಣಾ ಪ್ರಚಾರದುದ್ದಕ್ಕೂ, ಚಿರಾಗ್ ಮೋದಿಯ ಭಂಟನ ಪಾತ್ರವನ್ನು ನಿರ್ವಹಿಸಿದರು. ಸಾರ್ವಜನಿಕ ಸಭೆಗಳಲ್ಲಿ ಅಂಬೇಡ್ಕರ್ ಹೆಸರನ್ನು ತಪ್ಪಿಯೂ ಉಚ್ಚರಿಸದ ಚಿರಾಗ್, ಮೋದಿಯ ಭಜನೆಯಲ್ಲೇ ತನ್ನ ಮೋಕ್ಷವಿದೆ ಎಂಬಂತೆ ಮೋದಿ ಹೆಸರನ್ನು ಎತ್ತಿ ಮೆರೆದರು.

ನಿತೀಶ್ ಸೋತರೆ ತಾನು ಗೆದ್ದಂತೆ ಎಂದು ಭಾವಿಸಿದರು ಮತ್ತು ಅದರಲ್ಲಿ ಯಶಸ್ವಿಯಾದರು. ಆದರೆ ಅವರು ಚುನಾವಣೆಯಲ್ಲಿ ಗಳಿಸಿದ್ದು ಬರೇ ಒಂದು ಸ್ಥಾನ. ಸೋತುಸುಣ್ಣವಾಗಿರುವ ಸಮುದಾಯದಿಂದ ಬಂದ ಚಿರಾಗ್ ಪಾಸ್ವಾನ್ ಅವರದು ದಿಕ್ಕು ದಿಸೆಯಿಲ್ಲದ ರಾಜಕಾರಣ. ದಲಿತರಿಗೆ ಬಿಡಿ, ಸ್ವತಃ ಅವರಿಗಾದರೂ ಈ ರಾಜಕೀಯದಿಂದ ಲಾಭವಾಗುತ್ತದೆಯೇ ಎಂದರೆ ಅದೂ ಇಲ್ಲ. ಉವೈಸಿ ಅವರದು ಇದಕ್ಕಿಂತ ಭಿನ್ನವಾದ ಪ್ರಕರಣ. ಮಹಾಘಟಬಂಧನ್‌ನಲ್ಲಿ ಒಂದಾಗುವ ಒಲವು ತನಗಿತ್ತು, ಆದರೆ ಎಲ್ಲರೂ ತನ್ನನ್ನು ಅಸ್ಪಶ್ಯರಾಗಿ ನೋಡಿದರು ಎಂದು ಫಲಿತಾಂಶದ ಬಳಿಕ ಉವೈಸಿ ಸ್ಪಷ್ಟಪಡಿಸಿದ್ದಾರೆ. ಉವೈಸಿ ಪಕ್ಷ ಈ ಚುನಾವಣೆಯಲ್ಲಿ 5 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಚ್ಚರಿಯ ಸಾಧನೆ ತೋರಿಸಿದೆ. ಅತ್ಯುತ್ತಮ ಸಂಸದ ಪಟು ಪ್ರಶಸ್ತಿಗೆ ಭಾಜನರಾಗಿರುವ ಅಸದುದ್ದೀನ್ ಉತ್ತಮ ರಾಜಕೀಯ ಮುತ್ಸದ್ದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮುಸ್ಲಿಮರನ್ನಷ್ಟೇ ಗುರಿಯಾಗಿಸಿಕೊಂಡ ಆ ಪಕ್ಷದ ಜೊತೆಗೆ ಗುರುತಿಸಿಕೊಳ್ಳಲು ಉಳಿದ ಜಾತ್ಯತೀತ ಪಕ್ಷಗಳು ಅಂಜಿತು. ಇದನ್ನೇ ಸವಾಲಾಗಿ ತೆಗೆದುಕೊಂಡ ಉವೈಸಿ ಹಲವೆಡೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದರು ಮಾತ್ರವಲ್ಲ ಐದು ಸ್ಥಾನಗಳನ್ನು ಗೆದ್ದು, ತನ್ನ ಮಹತ್ವವನ್ನು ಸಾರಿದರು.

ರಾಜಕೀಯವಾಗಿ ದೇಶದ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡುತ್ತಿರುವ ಕಾಂಗ್ರೆಸ್‌ನಂತಹ ಪಕ್ಷಗಳು ತಮ್ಮ ವೈಫಲ್ಯಕ್ಕೆ ಉವೈಸಿಯನ್ನು ಹೊಣೆ ಮಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ‘ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುವುದಿಲ್ಲ’ ಎನ್ನುವ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ನಾಯಕರೇ ಉವೈಸಿ ಐದು ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲು ಕಾರಣ. ಮುಸ್ಲಿಮರು, ದಲಿತರು ಮತ್ತು ಜಾತ್ಯತೀತರ ಮತಗಳು ಹಲವು ರೀತಿಯಲ್ಲಿ ಛಿದ್ರವಾದರೂ, ಆರ್‌ಜೆಡಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವುದು ಸದ್ಯಕ್ಕೆ ನಮ್ಮ ಮುಂದಿರುವ ಅಳಿದುಳಿದ ಭರವಸೆಯಾಗಿದೆ. ಇದೇ ಸಂದರ್ಭದಲ್ಲಿ ಇತರ ಪಕ್ಷಗಳ ಜೊತೆಗೆ ಕೈ ಜೋಡಿಸಿದ ಪರಿಣಾಮವಾಗಿ ಎಡ ಪಕ್ಷಗಳು 16 ಸ್ಥಾನಗಳನ್ನು ಗೆದ್ದಿವೆ. ‘ಶ್ರೇಷ್ಟತೆಯ ವ್ಯಸನ’ದಿಂದ ಹೊರಬಂದು, ಕೋಮುವಾದಿ, ಸಂವಿಧಾನ ವಿರೋಧಿ ಶಕ್ತಿಗಳನ್ನು ಸೋಲಿಸುವ ಉದ್ದೇಶದಿಂದ ಇತರ ಪಕ್ಷಗಳ ಜೊತೆಯಾದರೆ ದೇಶದ ರಾಜಕೀಯದಲ್ಲಿ ಎಡಪಕ್ಷಗಳು ನಿರ್ಣಾಯಕ ಪಾತ್ರವಹಿಸಬಹುದು. ಈ ನಿಟ್ಟಿನಲ್ಲಿ ಎಡ ಪಕ್ಷಗಳ ನಾಯಕರಿಗೆ ಫಲಿತಾಂಶ ಸ್ಪಷ್ಟ ಸಂದೇಶವೊಂದನ್ನು ಕೊಟ್ಟಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ವೈಶಾಲ್ಯವನ್ನು ಎಡಪಕ್ಷಗಳ ನಾಯಕರು ಬೆಳೆಸಿಕೊಳ್ಳಬೇಕು.

 ಉಳಿದಂತೆ ಕರ್ನಾಟಕದ ಉಪಚುನಾವಣೆಯ ಫಲಿತಾಂಶ ವಿಶ್ಲೇಷಣೆಗೂ ಅನರ್ಹವಾದುದು. ಆರ್.ಆರ್. ನಗರದಲ್ಲಿ ಮುನಿರತ್ನರ ದುಡ್ಡು ಗೆದ್ದರೆ, ಶಿರಾದಲ್ಲಿ ಜೆಡಿಎಸ್‌ನ ಸಮಯ ಸಾಧಕನದ ಪ್ರಯೋಜನ ಪಡೆದು ಬಿಜೆಪಿ ಗೆದ್ದಿದೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಪಕ್ಷ ದಿವಂಗತ ಡಿ.ಕೆ. ರವಿಯವರ ಪತ್ನಿಯನ್ನು ಅಭ್ಯರ್ಥಿಯಾಗಿ ಘೋಷಿಸಿದ್ದೇ ಮೊದಲ ತಪ್ಪು. ಯಾಕೆಂದರೆ, ಡಿ.ಕೆ. ರವಿಯ ಪ್ರಕರಣದಲ್ಲಿ, ಅವರ ಪತ್ನಿಯ ಕುರಿತಂತೆ ಮಾಧ್ಯಮಗಳು ಅದಾಗಲೇ ಋಣಾತ್ಮಕವಾಗಿ ಬರೆದಿದ್ದವು. ರವಿಯವರ ಪೋಷಕರನ್ನು ಬಳಸಿಕೊಂಡು ಆಕೆಯನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದಿತ್ತು. ಆದುದರಿಂದಲೇ, ರವಿಯವರ ಒಳ್ಳೆಯತನಗಳನ್ನು ಮತಗಳಾಗಿ ನಗದೀಕರಿಸಲು ಕುಸುಮಾ ಅವರಿಗೆ ಸಾಧ್ಯವಾಗಿಲ್ಲ. ಬದಲಿಗೆ, ರವಿ ಸಾವಿಗೆ ನ್ಯಾಯ ಕೊಡುವ ರೀತಿಯಲ್ಲಿ ಕುಸುಮಾ ವಿರುದ್ಧ ಮತಗಳು ಬಿದ್ದವು. ಈ ಉಪಚುನಾವಣೆ ಯಡಿಯೂರಪ್ಪರ ಕುರ್ಚಿಯನ್ನು ಈ ಅವಧಿ ಮುಗಿಯುವವರೆಗೆ ಇನ್ನಷ್ಟು ಭದ್ರಗೊಳಿಸಿದೆ ಎಂದಷ್ಟೇ ಹೇಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News