ಬೇಡಿಕೆ ಕಳೆದುಕೊಂಡ ಮಣ್ಣಿನ ಹಣತೆ: ಕೊರೋನದಿಂದಲೂ ನಲುಗಿತು ಕುಂಬಾರರ ಬದುಕು

Update: 2020-11-12 13:59 GMT

ಬೆಂಗಳೂರು, ನ.11: ದೀಪಗಳ ಹಬ್ಬದಲ್ಲಿ ಹಣತೆಗಳ ವ್ಯಾಪಾರ-ವಹಿವಾಟು ಜೋರಾಗಿಯೇ ಇರುತ್ತದೆ. ಆದರೆ, ಇಂದಿನ ಆಧುನಿಕ ಬದುಕಿನಲ್ಲಿ ಕುಂಬಾರ ನಲುಗಿ ಹೋಗುತ್ತಿದ್ದಾರೆ. ಕೊರೋನದಿಂದಾಗಿ ಕುಂಬಾರರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಬಿದ್ದಿದೆ.

ಕತ್ತಲೆಯ ತೊರೆದು ಬೆಳಕು ಹರಡುವ ದೀಪಾವಳಿ ಹಬ್ಬಕ್ಕೆ ಇನ್ನು ನಾಲ್ಕೈದು ದಿನಗಳಷ್ಟೇ ಬಾಕಿಯಿದೆ. ಈ ಹಬ್ಬಕ್ಕೆ ಹಣತೆಗಳೇ ಪ್ರಮುಖ ಆಕರ್ಷಣೆಯಾಗಿದೆ. ಆದರೆ, ಹಣತೆ ತಯಾರಿಕೆಗೆ ಕತ್ತಲು ಕವಿದಿದ್ದು, ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಬೇಡಿಕೆಯೂ ಇಲ್ಲದಂತಾಗಿದೆ. ಇದರಿಂದಾಗಿ ಬೆಳಕಿನ ಹಬ್ಬದ ಸಂಭ್ರಮ ಸೊರಗಿದೆ. ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳ ಬಳಕೆ ಕಡಿಮೆಯಾದಂತೆ, ತಯಾರಿಕೆಯೂ ಕಡಿಮೆಯಾಗಿದೆ. ಇದೀಗ ಕೊರೋನ ಮಹಾಮಾರಿ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವುದರಿಂದಲೂ ಯಾರೂ ಹಣತೆಗಳನ್ನು ತಯಾರಿಸಲು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದುದರಿಂದ ಅಗತ್ಯವಿರುವಷ್ಟು ಹಣತೆಗಳು ಸಿಗುತ್ತಿಲ್ಲ.

ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂದರೆ ಅದೊಂದು ಅವರ ಬದುಕಿನ ಬೆಳಕಿನ ಹಬ್ಬವಾಗಿತ್ತು. ದೀಪಾವಳಿಗೆ ಎರಡು ತಿಂಗಳ ಮೊದಲೇ ವಿವಿಧ ಕಡೆಗಳಿಂದ ಲೋಡುಗಟ್ಟಲೇ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯಲ್ಲಿ, ಅಂಗಳದಲ್ಲಿ, ಖಾಲಿ ಸ್ಥಳವಿರುವ ಕಡೆಗಳಲ್ಲಿ ಲಕ್ಷಾಂತರ ಹಣತೆಗಳನ್ನು ಮಾಡಿ ಒಣಗಲು ಇಡುತ್ತಿದ್ದರು. ಬಳಿಕ ಅದನ್ನು ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು.

ಕೊರೋನ ಕರಿಛಾಯೆ: ಕಳೆದ ಮಾರ್ಚ್ನಿಂದ ಇಡೀ ದೇಶದಾದ್ಯಂತ ಕೊರೋನ ಸೋಂಕಿನ ಭೀತಿ ಆವರಿಸಿಕೊಂಡಿದೆ. ಸರಕಾರಗಳು ಒಂದೆರಡು ಬಾರಿ ಲಾಕ್ಡೌನ್ ಘೋಷಿಸಿತ್ತು. ಅನಂತರ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಕೊರೋನ ಸೋಂಕಿನ ಭಯ ಆವರಿಸಿಕೊಂಡಿದೆ. ಅದರಿಂದಾಗಿ ಮಣ್ಣಿನ ಕೆಲಸ ಮಾಡಲು ಯಾರೊಬ್ಬರು ಮುಂದೆ ಬರುತ್ತಿಲ್ಲ. ಇನ್ನು, ನಾವು ಅಣತೆಗಳನ್ನು ಮಾಡಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲು ಸಹ ಕೊರೋನ ಭಯ ಕಾಡುತ್ತಿದೆ ಎಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಬಳಿಯ ಕುಂಬಾರ ಸಮುದಾಯದ ರವಿಕುಮಾರ್ ಬೇಸರದಿಂದ ಹೇಳಿದ್ದಾರೆ. 

ಈಗಾಗಲೇ ನಾವು ಆರ್ಥಿಕವಾಗಿ ತೀರ ಹಿಂದುಳಿದಿದ್ದೀವೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಹಣತೆಗಳನ್ನು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾದರೆ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಕಾಡುತ್ತಿದೆ. ಆದುದರಿಂದಾಗಿ ಈ ಬಾರಿ ನಾವು ಹಣತೆಗಳನ್ನು ಮಾಡಲು ಮುಂದಾಗಿಲ್ಲ. ಆದರೆ, ಈ ಹಿಂದೆ ಮಾಡಿದ್ದನ್ನು ಉಳಿದುಕೊಂಡಿರುವುದನ್ನೇ ಇಲ್ಲಿನ ಸ್ಥಳೀಯರಿಗೆ ಅಷ್ಟೇ ಮಾರಾಟ ಮಾಡುತ್ತಿದ್ದೇವೆ. ಹೊಸ ಹಣತೆಗಳು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಹೊರ ರಾಜ್ಯಗಳಿಂದ ಆಮದು: ಹಣತೆಗಳನ್ನು ನೆರೆ ರಾಜ್ಯಗಳಾದ ತಮಿಳುನಾಡು, ಗುಜರಾತ್, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದಲೂ ಹಣತೆಗಳನ್ನು ತರಿಸಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ಕೊರೋನ ಕಾರಣದಿಂದ ಹಾಗೂ ನೆರೆಯಿಂದಾಗಿ ಹಣತೆಗಳೇ ಬಂದಿಲ್ಲ. ಅದಕ್ಕಾಗಿ ಕೇವಲ ಸೀಮಿತ ಹಣತೆಗಳನ್ನು ಮಾತ್ರವಷ್ಟೇ ಖರೀದಿ ಮಾಡಿದ್ದೇವೆ ಎಂದು ಜಯನಗರದ ಬಣ್ಣ ಸ್ಟೋರ್ನ ಮಾಲಕ ಶ್ರೀಕಂಠಮೂರ್ತಿ ಮಾಹಿತಿ ನೀಡಿದ್ದಾರೆ.

ಎಲ್ಇಡಿ ಮೆರಗು: ಆಧುನಿಕತೆ ವೇಗವಾಗಿ ಸಾಗುತ್ತಿದ್ದು, ಅದರ ಹಿಂದೆಯೇ ಜನರೂ ಸಾಗುತ್ತಿರುವುದರಿಂದ ಮಣ್ಣಿನ ಹಣತೆಗಳಿಗಿರುವ ಮೌಲ್ಯವೂ ಕಡಿಮೆಯಾಗುತ್ತಿದೆ. ನಗರ ಪ್ರದೇಶದ ಬಹುತೇಕರು ದೀಪಾವಳಿ ದಿನದಂದು ವಿದ್ಯುತ್ ಎಲ್ಇಡಿ ಶೈನಿಂಗ್ ಮೆರಗು ನೀಡುತ್ತಿದ್ದರೆ, ಗ್ರಾಮೀಣ ಪ್ರದೇಶಕ್ಕೂ ಇದು ವ್ಯಾಪಿಸಿದೆ. ಆದರೆ, ಕೆಲವೆಡೆ ಗ್ರಾಮೀಣ ಪ್ರದೇಶದಲ್ಲಿ ಹಣತೆಗಳು ಜೀವಂತವಾಗಿವೆ. ಆದರೆ, ಅದು ಬಳಕೆಯಷ್ಟೇ ಕಡಿಮೆಯಾಗುತ್ತಿದೆ.

ನಾವು ಸುಮಾರು 15 ವರ್ಷಗಳಿಂದಲೂ ದೀಪಾವಳಿಗೆ 10-20 ಸಾವಿರದಷ್ಟು ಹಣತೆಗಳನ್ನು ತಯಾರು ಮಾಡುತ್ತಿದ್ದೆವು. ಅದರಲ್ಲಿ ಶೇ.65-70 ರಷ್ಟು ಮಾರಾಟವಾಗುತ್ತಿದ್ದವು. ಆದರೆ, ಈ ಸಲ ಕೊರೋನ ಬಂದಿದ್ದರಿಂದ ನಾವು ಹೊರಗಡೆ ಹೋಗಲು ಆಗಿಲ್ಲ. ಅದರಿಂದಾಗಿ ಈ ಸಲ ಹಣತೆಗಳನ್ನು ಮಾಡಿಲ್ಲ. ಬದಲಿಗೆ, ಹಿಂದಿನ ವರ್ಷ ಮಾಡಿದ್ದವನ್ನೇ ಈ ವರ್ಷ ಮಾರಾಟ ಮಾಡಿಕೊಳ್ಳುತ್ತಿದ್ದೇವೆ.
-ಸಂಜೀವಯ್ಯ, ಕುಂಬಾರ

ಕಳೆದ 10 ವರ್ಷಗಳಿಂದಲೂ ನಮ್ಮ ಅಂಗಡಿಯಲ್ಲಿ ಹಣತೆಗಳನ್ನು ಮಾರಾಟ ಮಾಡುತ್ತಿದ್ದೇವೆ. 7-8 ವರ್ಷಗಳ ಹಿಂದೆ ಒಬ್ಬೊಬ್ಬರು 70-100 ರಷ್ಟು ಹಣತೆಗಳನ್ನು ಖರೀದಿ ಮಾಡುತ್ತಿದ್ದರು. ಆದರೆ, ಕಳೆದ 3-4 ವರ್ಷಗಳಿಂದ ಹಣತೆಗಳನ್ನು ಖರೀದಿ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ ಹಾಗೂ ಹಣತೆಗಳನ್ನು ಕಡಿಮೆ ಪ್ರಮಾಣದಲ್ಲಿ ಕೊಳ್ಳುತ್ತಾರೆ. ಈ ಬಾರಿ ಕೊರೋನ ಕಾರಣದಿಂದಾಗಿ ಬೇರೆಬೇರೆ ಕಡೆಗಳಿಂದ ಹಣತೆಗಳು ಬಂದಿಲ್ಲ. ಹೀಗಾಗಿ, ಹಣತೆಗಳೇ ಇಲ್ಲದಂತಾಗಿದೆ. ಹಿಂದಿನ ವರ್ಷ ಉಳಿದಿರುವುದನ್ನೇ ಮಾರಾಟಕ್ಕಿಡಲಾಗಿದೆ.
-ಜನಾರ್ಧನ, ವೀಣಾ ಸ್ಟೋರ್ಸ್ ಮಲ್ಲೇಶ್ವರಂ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News