'ಕೊನೆಯ ಚುನಾವಣೆ' ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ನಿತೀಶ್ ಕುಮಾರ್

Update: 2020-11-13 04:25 GMT

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಮುಕ್ತಾಯ ಹಂತದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ "ಇದು ನನ್ನ ಕೊನೆ ಚುನಾವಣೆ" ಎಂದು ಹೇಳಿದ್ದಾರೆ ಎನ್ನಲಾದ ವರದಿಗಳ ಬಗ್ಗೆ ಜೆಡಿಯು ಮುಖಂಡ ಇದೀಗ ಸ್ಪಷ್ಟನೆ ನೀಡಿದ್ದಾರೆ.

"ನನ್ನ ಹೇಳಿಕೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ" ಎಂದು ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ನಿತೀಶ್ ನೀಡಿದ್ದರೆನ್ನಲಾದ ಹೇಳಿಕೆ ರಾಜಕೀಯ ವಲಯದಲ್ಲಿ ಹಲವು ವದಂತಿಗಳಿಗೆ ಕಾರಣವಾಗಿತ್ತು. ಎನ್‌ಡಿಎ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿದರೂ, ಕೂಟದ ದೊಡ್ಡಣ್ಣನಾಗಿ ಬಿಜೆಪಿ ಹೊರಹೊಮ್ಮಿತ್ತು. ಬಿಜೆಪಿ 71 ಸ್ಥಾನ ಗೆದ್ದರೆ, ಜೆಡಿಯು ಕೇವಲ 43 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

"ನಾನು ಹೇಳಿದ್ದು ನಿಮಗೆ ಸರಿಯಾಗಿ ಅರ್ಥವಾಗಿಲ್ಲ" ಎಂದು ಹೇಳಿದರು. ಪ್ರತಿ ಬಾರಿ ಕೊನೆಯ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳುವಂತೆ ಈ ಬಾರಿಯೂ ಪುರ್ನಿಯಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯ ಬಳಿಕ ಪತ್ರಕರ್ತರ ಜತೆ ಮಾತನಾಡುತ್ತಾ ಎಲ್ಲವೂ ಚೆನ್ನಾಗಿದ್ದರೆ ಅಂತ್ಯವೂ ಚೆನ್ನಾಗಿರುತ್ತದೆ (ಅಂತ್ ಭಲಾ ತೋ ಸಬ್ ಭಲಾ) ಎಂದು ಹೇಳಿದ್ದರು.

"ಅದಕ್ಕೆ ಮುನ್ನ ಹಾಗೂ ಬಳಿಕ ನಾನು ಹೇಳಿದ್ದನ್ನು ಕೇಳಿದರೆ ನಿಮಗೆ ಇಡೀ ಚಿತ್ರಣ ಅರ್ಥವಾಗುತ್ತದೆ. ನೀವು ಹಾಗೆ ಮಾಡಿದ್ದಲ್ಲಿ ನೀವು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ" ಎಂದರು. "ಯೇ ಮೇರಾ ಅಖಿರಿ ಚುನಾವ್ ಹೈ" ಎಂಬ ಹೇಳಿಕೆಯನ್ನು ವಿರೋಧ ಪಕ್ಷಗಳು ಕೊನೆಯ ಚುನಾವಣೆ ಎಂದು ಅರ್ಥೈಸಿದ್ದವು. "ನಿತೀಶ್ ಕೊನೆಯ ಚುನಾವಣೆ ಎಂದು ಹೇಳಿಲ್ಲ. ಕೊನೆಯ ಚುನಾವಣಾ ಸಭೆ ಎಂದು ಹೇಳಿದ್ದರು. ರಾಜಕೀಯ ನಿವೃತ್ತಿ ಬಗ್ಗೆ ನಿತೀಶ್ ಕುಮಾರ್ ಮಾತನಾಡಿಲ್ಲ" ಎಂದು ಜೆಡಿಯು ಸ್ಪಷ್ಟನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News