ರಾಮ ಜನ್ಮಭೂಮಿ ಟ್ರಸ್ಟ್ 'ಅಕ್ರಮ' ಎಂದು ಆರೋಪಿಸಿ ಗೃಹ ಸಚಿವಾಲಯಕ್ಕೆ ನೋಟಿಸ್ ಕಳುಹಿಸಿದ ನಿರ್ವಾಣಿ ಅಖಾಡ ಮುಖ್ಯಸ್ಥ

Update: 2020-11-13 08:35 GMT

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ರಚಿಸಲಾಗಿರುವ ಟ್ರಸ್ಟ್ ಅಕ್ರಮವಾಗಿದೆ, ಏಕಪಕ್ಷೀಯವಾಗಿದೆ ಎಂದು ಆರೋಪಿಸಿರುವ ಅಯೋಧ್ಯೆಯ ನಿರ್ವಾಣಿ ಅಖಾಡಾದ ಮುಖ್ಯಸ್ಥ ಮಹಂತ್ ಧರಮ್ ದಾಸ್ ಅವರು ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದ ರೀತಿಯಲ್ಲಿಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಬೇಕು ಎಂದು ಆಗ್ರಹಿಸಿ ಗುರುವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ನೋಟಿಸ್ ದೊರಕಿದ ಎರಡು ತಿಂಗಳೊಳಗೆ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳದೇ ಇದ್ದರೆ ಕಾನೂನು ಹೋರಾಟ ನಡೆಸಲಾಗುವುದೆಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಟ್ರಸ್ಟ್ ಸ್ಥಾಪನೆಯಾದಾಗ ಟ್ರಸ್ಟ್ ನ ಆಸ್ತಿಯನ್ನೂ ಸೇರಿಸದೇ ಇರುವುದು ಹಾಗೂ ಪ್ರಕರಣದಲ್ಲಿ ಆರಂಭದಿಂದಲೂ ಕಾನೂನು ಹೋರಾಟ ನಡೆಸಿದವರನ್ನು ಟ್ರಸ್ಟ್ ನ ಭಾಗವಾಗಿಸಲಾಗಿಲ್ಲ, ಬದಲಾಗಿ 1989ರ ನಂತರ ಈ ಪ್ರಕರಣದಲ್ಲಿ ಇದ್ದವರಿಗೆ ಮಹತ್ವ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ 1949ರಿಂದ ಪೂಜೆ ಸಲ್ಲಿಸುತ್ತಿದ್ದ ಅರ್ಚಕರು ಮಹಂತ ಗುರುದಾಸ್ ಅವರ ಗುರುವಾಗಿದ್ದರು ಎಂದೂ ನೋಟಿಸ್ ನಲ್ಲಿ ಹೇಳಲಾಗಿದೆ. ಗೃಹ ಸಚಿವಾಲಯವು ತನ್ನ ರಾಜಕೀಯ ಅಜೆಂಡಾ ಸಾಧಿಸುವ ಸಲುವಾಗಿ ಪರಿಶಿಷ್ಟ ಜಾತಿಯ ಸದಸ್ಯರೊಬ್ಬರನ್ನು ಟ್ರಸ್ಟಿಯಾಗಿಸಿದ್ದು ಇದು ಹಿಂದುಗಳನ್ನು ವಿಭಜಿಸುವ ಯತ್ನವಾಗಿದೆ ಎಂದೂ ನೋಟಿಸ್ ನಲ್ಲಿ ಮಹಂತ್ ದಾಸ್ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News